ಬೆಂಗಳೂರು: ಮೊಬೈಲ್ ನಲ್ಲಿ ರೀಲ್ಸ್ ನೋಡುತ್ತಿದ್ದ ವಿಚಾರಕ್ಕೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಬಿಯರ್ ಬಾಟಲಿಯಿಂದ ಇರಿದು ಕೊಂದ ಪತಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಹೆಚ್ಎಎಲ್ ವಿಭೂತಿಪುರದಲ್ಲಿ ನಡೆದಿದೆ.
ದಾವಣಗೆರೆ ಮೂಲದ ಪತ್ನಿ ಶೃತಿಯನ್ನು (30) ಕೊಲೆಗೈದ ಬಳಿಕ ಹೆದರಿದ ಪತಿ ರಾಘವೇಂದ್ರ (38) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಾವಣಗೆರೆಯ ಶೃತಿ ಹಾಗೂ ರಾಘವೇಂದ್ರಗೆ 17 ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದು, ಮಕ್ಕಳನ್ನು ಶೃತಿಯ ಪೋಷಕರ ಮನೆಯಲ್ಲಿ ಬಿಟ್ಟು ಇಬ್ಬರೂ ವಿಭೂತಿಪುರದಲ್ಲಿ ವಾಸವಿದ್ದರು. ದಂಪತಿ ವಾಸವಿದ್ದ ಕಟ್ಟಡದ ಮೇಲ್ಮಹಡಿಯಲ್ಲಿಯೇ ರಾಘವೇಂದ್ರನ ಪೋಷಕರು ವಾಸವಿದ್ದರು.
ರಾಘವೇಂದ್ರ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಶೃತಿ ಅಪಾರ್ಟ್ಮೆಂಟ್ವೊಂದರಲ್ಲಿ ಮನೆ ಕೆಲಸ ಮಾಡಿಕೊಂಡಿದ್ದರು. ಪತ್ನಿ ಅಡುಗೆ ಮಾಡಲ್ಲ, ಅತಿಯಾಗಿ ಮೊಬೈಲ್ ಫೋನ್ ಬಳಸುತ್ತಿರುತ್ತಾಳೆ ಎಂದು ಆಗಾಗ್ಗೆ ರಾಘವೇಂದ್ರ ಗಲಾಟೆ ಮಾಡುತ್ತಿದ್ದನು.
ಇತ್ತ ಪತಿ ಸಹ ಮದ್ಯಪಾನ ಮಾಡುತ್ತಾನೆ ಎಂದು ಶೃತಿ ಆರೋಪಿಸಿದ್ದಳು. ಇಬ್ಬರ ನಡುವಿನ ಈ ಗಲಾಟೆ ಇತ್ತೀಚಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಇಬ್ಬರಿಗೂ ಪೊಲೀಸರು ಬುದ್ಧಿವಾದ ಹೇಳಿ ಕಳಿಸಿದ್ದರು.
ಮಂಗಳವಾರ ರಾತ್ರಿ ದಂಪತಿ ನಡುವೆ ಮಾತಿಗೆ ಮಾತು ಬೆಳೆದು ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ರಾಘವೇಂದ್ರ, ಖಾಲಿ ಬಿಯರ್ ಬಾಟಲಿಯಿಂದ ಪತ್ನಿ ಶೃತಿಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಶೃತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿಯ ಸಾವಿನ ನಂತರ ತಾನೂ ಸಹ ನೇಣು ಬಿಗಿದುಕೊಂಡು ರಾಘವೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಹೆಚ್ಎಎಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿರುವುದಾಗಿ ವೈಟ್ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.



