Wednesday, June 24, 2026
Google search engine
Homeಅಪರಾಧಮೈಸೂರಿನಲ್ಲಿ ಬಾಲಕರು ಸೇರಿ 18 ಮಂದಿ ಜೀತದಿಂದ ಮುಕ್ತಿ: ಮೂವರು ಮಾಲೀಕರ ಬಂಧನ

ಮೈಸೂರಿನಲ್ಲಿ ಬಾಲಕರು ಸೇರಿ 18 ಮಂದಿ ಜೀತದಿಂದ ಮುಕ್ತಿ: ಮೂವರು ಮಾಲೀಕರ ಬಂಧನ

ಇಬ್ಬರು ಬಾಲ ಕಾರ್ಮಿಕರು ಸೇರಿ ಒಟ್ಟು 18 ಮಂದಿಯನ್ನು ಜೀತದಿಂದ ಮುಕ್ತಗೊಳಿಸಿ ಅಧಿಕಾರಿಗಳು ರಕ್ಷಿಸಿದ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.

ಟಿ.ನರಸೀಪುರ ತಾಲೂಕಿನ ಸೋಸಲೆ ಹೋಬಳಿಯ ಬೇವಿನಹಳ್ಳಿ ಗ್ರಾಮದ ಹೊರವಲಯದ ಇಟ್ಟಿಗೆ ಕಾರ್ಖಾನೆಗಳಲ್ಲಿ ಬಲವಂತದಿಂದ ದುಡಿಸಿಕೊಳ್ಳುತ್ತಿದ್ದ ಮೂವರು ಮಾಲೀಕರಾದ ಬೇವಿನಹಳ್ಳಿ ಗ್ರಾಮದ ಗಿರೀಶ್, ಮಹಾದೇವ್ ಹಾಗೂ ಯತೀರಾಜು ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಜೀತ ಪದ್ಧತಿಗೆ ಸಿಲುಕಿದ್ದ ಮುತ್ತಣ್ಣ(30) ಮತ್ತು ಜ್ಯೋತಿ (24) ದಂಪತಿ ಹಾಗೂ ಇವರ (13 ಮತ್ತು 9 ವರ್ಷದ) ಇಬ್ಬರು ಪುತ್ರರ ಪೈಕಿ ಒಬ್ಬ ಬಾಲಕ ಹಾಗೂ ಚೆನ್ನಪ್ಪ (50), ಆತ್ಮುಗಂ (22), ಗಣೇಶ್ (25), ರಾಜೇಶ್ವರಿ (22), ನಾಗಮ್ಮ (32), ಮಲ್ಲಿಕಾ (40), ಸುರೇಶ್ (27), ಪ್ರೇಮಾ (26), ಲಕ್ಷ್ಮಿ (24), ಚಂದ್ರು (60), ಚೆನ್ನಮ್ಮ (52), ಅಮುದಾ (34) ಹಾಗೂ ವೆಲುವನಾದ (32) ಎಂಬವರನ್ನು ಜೀತ ಮುಕ್ತಗೊಳಿಸಲಾಗಿದೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಡಿ.ಎಲ್.ಎಸ್.ಎ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ನಾಗರಾಜು ಸಿದ್ದಪ್ಪ ಅಂಕಸ ದೊಡ್ಡಿ, ಟಿ.ನರಸೀಪುರ ತಹಶೀಲ್ದಾರ್ ಸುರೇಶಾಚಾರ್ ಬನ್ನೂರು, ಪೊಲೀಸ್ ಇನ್ಸ್​ಪೆಕ್ಟರ್ ಸತೀಶ್, ಕಾರ್ಮಿಕ ತನಿಖೆಯ ಅಧಿಕಾರಿ ಟಿ.ವಿ.ಲಕ್ಷ್ಮೀಶ್ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಇಟ್ಟಿಗೆ ತಯಾರಿಕಾ ಕಾರ್ಖಾನೆಗಳ ಮೇಲೆ ದಾಳಿ ನಡೆಸಲಾಗಿದೆ.

ಮುತ್ತಣ್ಣ ಮತ್ತು ಜ್ಯೋತಿ ದಂಪತಿ ತಮಿಳುನಾಡು ಮೂಲದವರಾಗಿದ್ದು, ಹಲವು ವರ್ಷಗಳಿಂದ ಬೇವಿನಹಳ್ಳಿಯಲ್ಲಿ ನೆಲೆಸಿದ್ದಾರೆ. ದಂಪತಿಗೆ ಮುಂಗಡವಾಗಿ 75 ಸಾವಿರ ರೂ. ನೀಡಿದ್ದ ಇಟ್ಟಿಗೆ ಕಾರ್ಖಾನೆ ಮಾಲೀಕ, ಸುಮಾರು 7 ವರ್ಷಗಳಿಂದ ಬಲವಂತದಿಂದ ದುಡಿಮೆ ಮಾಡಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ದಂಪತಿಗೆ ವಾರಕ್ಕೆ ಕೇವಲ ತಲಾ 1 ಸಾವಿರ ಕೂಲಿ ನೀಡಲಾಗುತ್ತಿತ್ತು. ಅಲ್ಲದೇ ಕೂಡಿ ಹಾಕಿ ಬಲವಂತವಾಗಿ ದುಡಿಸಿಕೊಳ್ಳುತ್ತಿರುವ ಬಗ್ಗೆ ಐಜೆಎಂ ಸಂಸ್ಥೆ ಹಾಗೂ ಮಡಿಲು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಇವರ ಇಬ್ಬರು ಮಕ್ಕಳ ಪೈಕಿ ಒಬ್ಬನಿಂದಲೂ ಕೆಲಸ ಮಾಡಿಸಲಾಗುತ್ತಿತ್ತು. ಎರಡು ತಿಂಗಳ ಹಿಂದೆ ಇಟ್ಟಿಗೆ ಕಾರ್ಖಾನೆಯಿಂದ ದಂಪತಿ ತಪ್ಪಿಸಿಕೊಂಡಿದ್ದು, ಗ್ರಾಮದಲ್ಲೇ ಇದ್ದ ಮಕ್ಕಳಿಗೆ ಬೆದರಿಕೆ ಹಾಕುವ ಮೂಲಕ ಕಾರ್ಖಾನೆಯವರು ದಂಪತಿಯನ್ನು ಪತ್ತೆ ಮಾಡಿ ಕರೆತಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಿಂದ ಉಳಿದ ಕಾರ್ಮಿಕರು ಜೀತಪದ್ಧತಿಯಡಿ ದುಡಿಯುತ್ತಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳಾದ ಗಿರೀಶ್, ಮಹದೇವು, ಯತಿರಾಜು 35ರಿಂದ 40 ವರ್ಷದ ವಯೋಮಾನದವರು. ಎಸ್.ಸಿ, ಎಸ್.ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮೂವರು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಡಿಸಿಆರ್​​ಇ ವಶದಲ್ಲಿದ್ದಾರೆ. ಟಿ. ನರಸೀಪುರ ತಹಶೀಲ್ದಾರ್ ನೀಡಿದ ದೂರಿನನ್ವಯ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ನಾಗರಾಜು ಸಿದ್ದಪ್ಪ ಅವರು ಪ್ರತಿಕ್ರಿಯಿಸಿ, “ಸೋಮವಾರ ಬೆಳಿಗ್ಗೆ 11ಕ್ಕೆ ಬೇವಿನಹಳ್ಳಿ ಹೊರವಲಯದ ಇಟ್ಟಿಗೆ ಕಾರ್ಖಾನೆಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸಲಾಯಿತು. ಈ ವೇಳೆ ಬಲವಂತವಾಗಿ ತಮ್ಮನ್ನು ದುಡಿಸಿಕೊಳ್ಳುತ್ತಿದ್ದಾರೆ ಎಂದು ಕಾರ್ಮಿಕರು ತಿಳಿಸಿದರು. ಮುತ್ತಣ್ಣ ಮತ್ತು ಜ್ಯೋತಿ ದಂಪತಿಗೆ ನಿನ್ನೆ ರಾತ್ರಿ ಹಲ್ಲೆ ಮಾಡಿದ್ದರು. ಇದರಿಂದ ಅವರು ಗಾಯಗೊಂಡಿದ್ದಾರೆ. ಇವರು ತಮಿಳುನಾಡಿನ ಬುಡಕಟ್ಟು ಸಮುದಾಯದವರು. ಬಹುತೇಕ ಎಲ್ಲಾ ಕಾರ್ಮಿಕರು ತಮಿಳುನಾಡಿನವರೇ. ಆದರೆ, ಹಲವು ವರ್ಷಗಳಿಂದ ಅದೇ ಗ್ರಾಮದಲ್ಲಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ. ರಕ್ಷಿಸಿರುವ ಕಾರ್ಮಿಕರಿಗೆ ಕಾನೂನಿನಡಿ ಜಿಲ್ಲಾಡಳಿತದಿಂದ ಪುನರ್ವಸತಿ ಕಲ್ಪಿಸಲು ಕ್ರಮ ವಹಿಸಲಾಗುವುದು” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments