Thursday, August 6, 2026
Google search engine
Homeಅಪರಾಧನಟ ದರ್ಶನ್ ಗೆ ಸಂಕಷ್ಟ: ಮಾಫಿ ಸಾಕ್ಷಿ ಹೇಳಿಕೆಗೆ ಮುಂದಾದ ಮೂವರು

ನಟ ದರ್ಶನ್ ಗೆ ಸಂಕಷ್ಟ: ಮಾಫಿ ಸಾಕ್ಷಿ ಹೇಳಿಕೆಗೆ ಮುಂದಾದ ಮೂವರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿ ನುಡಿಯುವುದಾಗಿ ಮೂವರು ಆರೋಪಿಗಳು ನ್ಯಾಯಾಲಯದ ಮೊರೆ ಹೋಗಿರುವುದು ಜಾಮೀನು ಪಡೆಯಲು ಹರಸಾಹಸ ಪಡುತ್ತಿರುವ ನಟ ದರ್ಶನ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ  ಎ-13ನೇ ಆರೋಪಿ ಪ್ರದೂಷ್ ರಾವ್ ಮಾಫಿ ಸಾಕ್ಷಿಯನ್ನಾಗಿ ಪರಿಣಗಣಿಸುವಂತೆ ಸಿಸಿಹೆಚ್-59 ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ಪ್ರಕರಣದಲ್ಲಿ ಎ-10 ಆರೋಪಿ ರವಿಶಂಕರ್ ಹಾಗೂ ಎ-10 ವಿನಯ್ ಮಾಫಿ ಸಾಕ್ಷಿ ಹೇಳಿಕೆ ನೀಡುವುದಾಗಿ ಅರ್ಜಿ ಸಲ್ಲಿಸುವುದಾಗಿ ಅವರ ಪರ ವಕೀಲರು ಗುರುವಾರ ವಾದ ಮಂಡಿಸಿದ್ದಾರೆ.

ಸಿಆರ್​​ಪಿಸಿ ಸೆಕ್ಷನ್ 307ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ ವಾದ ಮಂಡಿಸಿದ ಪ್ರದೋಷ್ ಪರ ವಕೀಲ ದಿವಾಕರ್, ಹತ್ಯೆ ಪ್ರಕರಣದಲ್ಲಿ ನನ್ನ ಕ್ಷಕಿದಾರರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಆತ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲಿದ್ದು, ನ್ಯಾಯಾಲಯವು ಕ್ಷಮಾದಾನ ನೀಡಬೇಕು. ಸಹ ಆರೋಪಿಗಳೊಂದಿಗೆ ಜೈಲಿನಲ್ಲಿ ಒಂದೇ ಸೆಲ್​ನಲ್ಲಿರುವ ಪ್ರದೂಷ್ ಅವರನ್ನು ಮತ್ತೊಂದು ಸೆಲ್​ಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿದರು.

ಆರೋಪಿಗಳಾದ ರವಿಶಂಕರ್ ಹಾಗೂ ವಿನಯ್ ಪರ ವಾದ ಮಂಡಿಸಿದ ವಕೀಲರು, ನಮ್ಮ ಕಕ್ಷಿದಾರರು ಸಹ ಮಾಫಿ ಸಾಕ್ಷಿಯಾಗಲು ತಯಾರಿದ್ದಾರೆ. ಈ ಕುರಿತಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳುತ್ತಿದ್ದಂತೆ ಆಕ್ಷೇಪಿಸಿದ ಪ್ರದೂಷ್ ಪರ ವಕೀಲರು, ನಾವು ಮೊದಲು ಅರ್ಜಿ ಹಾಕಿದ್ದೇವೆ. ಅವರ ಅರ್ಜಿ ವಿಲೀನಗೊಳಿಸದೆ ನಮ್ಮ ಅರ್ಜಿಯನ್ನು ಪರಿಗಣಿಸಬೇಕು. ಸಾಕ್ಷಿಗೆ ರಕ್ಷಣೆ ನೀಡಿ, ಆದಷ್ಟು ಬೇಗ ಮಾಫಿ ಸಾಕ್ಷಿ ಹೇಳಿಕೆಗೆ ಅವಕಾಶ ನೀಡಿ. ಇದು ಪ್ರಾಸಿಕ್ಯೂಷನ್​ಗೆ ನೆರವಾಗಲಿದೆ ಎಂದರು.

ಈ ಬಗ್ಗೆ ನಿಲುವು ತಳೆಯುವಂತೆ ನ್ಯಾಯಾಲಯ ನೀಡಿರುವ ಸೂಚನೆ ಹಿನ್ನೆಲೆಯಲ್ಲೇ ಪ್ರಾಸಿಕ್ಯೂಷನ್ ಪರ ವಾದ ಆರಂಭಿಸಿದ ಎಸ್​​ಪಿಪಿ ಪ್ರಸನ್ನ ಕುಮಾರ್, ಮೊದಲಿಗೆ ಆರೋಪಿ ಸಲ್ಲಿಸಿದ್ದ ಅರ್ಜಿ ಬಗ್ಗೆ ವಿಚಾರಣೆ ನಡೆಸಬೇಕು. ಅರ್ಜಿ ವಿಚಾರಣೆ ನಡೆಸಿದ ನಂತರ ಆತನಿಗೆ ಕೋರ್ಟ್​ಗೆ ಬಂದು ಸಾಕ್ಷಿ ಹೇಳುವುದಕ್ಕೆ ಅವಕಾಶ ಮಾಡಿಕೊಡಬೇಕು. ಪ್ರಕರಣದ ಇತರೆ ಆರೋಪಿಗಳ ವಿರೋಧಕ್ಕೆ ಅವಕಾಶವಿಲ್ಲ. ಆರೋಪಿಯು ಸಿಆರ್​​ಪಿಸಿ 307 ಪ್ರಕಾರ ಅಪ್ರೂವರ್ ಆಗಲು ಅರ್ಜಿ ಸಲ್ಲಿಸಿದ್ದಾರೆ. ಪ್ರಾಸಿಕ್ಯೂಷನ್​ಗೂ ಮಾಫಿ ಸಾಕ್ಷಿ ಸಹಾಯವಾಗಲಿದೆ ಎಂದರು.

ಅಪ್ರೂವರ್ ಆಗಬಯಸುವ ಆರೋಪಿ ಸಿಆರ್ ಪಿಸಿ ಸೆಕ್ಷನ್​ 306 ನ ಪ್ರಕ್ರಿಯೆ ಪಾಲಿಸಬೇಕು. ಈ ಹಂತದಲ್ಲಿ ಇತರೆ ಸಹ ಆರೋಪಿಗಳ ವಾದ ಕೇಳಬೇಕಿಲ್ಲ. ಕೋರ್ಟ್ ಕ್ಷಮಾದಾನಕ್ಕೆ ಒಪ್ಪಿದ ಬಳಿಕ ಇತರೆ ಆರೋಪಿಗಳಿಗೆ ಪ್ರಶ್ನಿಸುವ ಹಕ್ಕು ಇರಲಿದೆ. ಈ ಪ್ರಕ್ರಿಯೆಗಳಲ್ಲಿ ಲೋಪಗಳಿದ್ದರೆ ಹೈಕೋರ್ಟ್​ನಲ್ಲಿ ಪ್ರಶ್ನಿಸಬಹುದು ಎಂದರು.

ದರ್ಶನ್ ಪರ ವಾದ ಮಂಡಿಸಿದ ಹಷ್ಮತ್ ಪಾಷಾ, ಆರೋಪಿಗೆ ಪ್ರಕರಣ ವಿಚಾರಣೆ ಏನಾಗುತ್ತಿದೆ ಎಂಬುದರ ಬಗ್ಗೆ ತಿಳಿಯುವ ಹಕ್ಕಿದೆ. ಆರೋಪಿ ಪರ ವಕೀಲರಿಗೆ ಈ ಅರ್ಜಿಯ ಪ್ರತಿ ಕೊಟ್ಟಿಲ್ಲ. ಬುಧವಾರ ಕೇಸ್ ಮುಂದೂಡಿಕೆ ಮೇಲೆ ಅರ್ಜಿ ಹಾಕಿದ್ದಾರೆ. ಆರೋಪಿಗೆ ತನ್ನ ವಾದ ಮಂಡಿಸುವ ಮೂಲಭೂತ ಹಕ್ಕಿದೆ. ಕ್ಷಮಾದಾನ ಕೇಳಿದ ತಕ್ಷಣ ಕೊಡುವ ಹಾಗಿಲ್ಲ. ಸಾಕ್ಷಿ ಹೇಳ್ತೀನಿ ಎಂದಾಕ್ಷಣ ಆರೋಪಿಗೆ ಕ್ಷಮೆ ನೀಡಲಾಗದು. ಯಾವ ಆರೋಪಿ ಮಾಫಿ ಸಾಕ್ಷಿ ಆಗಲು ಬಯಸುತ್ತಾನೋ ಆತನ ಹೇಳಿಕೆ ದಾಖಲಿಸಬೇಕು, ಆರೋಪಿ ಹೇಳಿಕೆ ದಾಖಲಿಸದೇ ಪ್ರಾಸಿಕ್ಯೂಷನ್ ಒಪ್ಪಿಗೆ ನೀಡಲು ಅವಕಾಶ ಇಲ್ಲ. ಮಾಫಿ ಸಾಕ್ಷಿ ಪ್ರಾಸಿಕ್ಯೂಷನ್ ಪರ ಇರಬಾರದು, ನ್ಯಾಯದ ಪರ ಇರಬೇಕು ಎಂದು ತಿಳಿಸಿದರು.

ಪ್ರಾಸಿಕ್ಯೂಷನ್​ಗೆ ಇಷ್ಟ ಬಂದಂತೆ ಕೇಸ್ ಹಿಂಪಡೆಯಲಾಗದು. ಆರೋಪಿ ಮೇಲಿನ ಕೇಸ್ ಸುಲಭಕ್ಕೆ ಹಿಂಪಡೆಯಲಾಗದು. ಡಾ. ರಾಜ್ ಕುಮಾರ್ ಕೇಸ್​ನಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸುವ ಪದ್ಧತಿಗೆ ಪ್ರೋತ್ಸಾಹಿಸಬಾರದು. ನಾಳೆ ಈತ ಬಂದು ಸಹ ಆರೋಪಿಗಳ ವಿರುದ್ಧ ಹೇಳಿಕೆ ನೀಡಬಹುದು. ಪ್ರಕ್ರಿಯೆ ಲೋಪಗಳ ಬಗ್ಗೆ ಪ್ರಶ್ನಿಸುವ ಹಕ್ಕು ಆರೋಪಿಗಿದೆ. ಪರಿಣಾಮಿತ ವ್ಯಕ್ತಿಯ ವಾದ ಕೇಳದೇ ಕ್ಷಮಾದಾನ ತೀರ್ಮಾನಿಸಬಾರದು ಎಂದು ವಾದ ಮಂಡಿಸಿದರು.

ವಾದ-ಪ್ರತಿವಾದ ಆಲಿಸಿದ ಕೋರ್ಟ್ ಮಧ್ಯಾಹ್ನ 3:30ಕ್ಕೆ ಮುಂದೂಡಿತ್ತು.ಮಧ್ಯಾಹ್ನ ಬಳಿಕ ಮಾಫಿ ಸಾಕ್ಷಿ ಕೋರಿ ಅರ್ಜಿ ವಿಚಾರಣೆ ಮುಂದುವರೆಯಿತು. ವಾದ ಮುಂದುವರೆಸಿದ ಪ್ರಸನ್ನ ಕುಮಾರ್, ಮಾಫಿ ಸಾಕ್ಷಿ ಕುರಿತಂತೆ ಪ್ರಾಸಿಕ್ಯೂಷನ್​ನಿಂದ ಲಿಖಿತ ಹೇಳಿಕೆ ಪಡೆಯಬೇಕೆಂದಿಲ್ಲ. ಕ್ಷಮಾದಾನ ಅರ್ಜಿಯನ್ನ ಪ್ರಾಸಿಕ್ಯೂಷನ್ ವಿರೋಧಿಸುವುದಿಲ್ಲ. ಆದರೆ ಆರೋಪಿ ಪ್ರದೋಷ್​ಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ಷರತ್ತು ವಿಧಿಸಬೇಕು ಎಂದು ಹೇಳಿ ಮೆಮೊ ಸಲ್ಲಿಸಿದರು. ಇದಕ್ಕೆ ಆಕ್ಷೇಪಿಸಿದ ಹಷ್ಮತ್ ಪಾಷ, ಕೇವಲ ಕ್ಷಮಾದಾನ ನೀಡಬಹುದೆಂಬ ಪ್ರಾಸಿಕ್ಯೂಷನ್ ಹೇಳಿಕೆ ಸಾಕಾಗುವುದಿಲ್ಲ. ವಿವರವಾದ ಲಿಖಿತ ಅಭಿಪ್ರಾಯ ನೀಡಬೇಕು. ಈ ಬಗ್ಗೆ ಆಕ್ಷೇಪಣೆ ಸಲ್ಲಿಸುತ್ತೇವೆ ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಮಾಫಿ ಸಾಕ್ಷಿ ಅರ್ಜಿ ಸಂಬಂಧ ಸಹ ಆರೋಪಿಗಳ ಆಕ್ಷೇಪಣೆಗೆ ಅವಕಾಶ ನೀಡಬೇಕೆ ? ಬೇಡವೇ ಎಂಬುದರ ಬಗ್ಗೆ ನ್ಯಾಯಾಲಯ ಆ.10ಕ್ಕೆ ಆದೇಶ ಕಾಯ್ದಿರಿಸಿತು

ಪ್ರಕರಣದ ಹಿನ್ನೆಲೆ:
ಕಳೆದ 2024ರ ಜೂನ್​​ 8ರಂದು ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಜೂನ್ 11ರಂದು ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಕೃತ್ಯ ಮರೆಮಾಚಲು ನೀಡಲಾಗಿದ್ದ ಸುಮಾರು 30 ಲಕ್ಷ ಹಣ 14ನೇ ಆರೋಪಿ ಪ್ರದೂಷ್ ಮನೆಯಲ್ಲಿ ಪತ್ತೆಯಾಗಿತ್ತು.

ಒಳಸಂಚು ಹಾಗೂ ಸಾಕ್ಷ್ಯ ನಾಶಪಡಿಸಿರುವ ಆರೋಪದಡಿ ಬಂಧಿಸಲಾಗಿತ್ತು. ರವಿಶಂಕರ್ ಹಾಗೂ ವಿನಯ್ ಅವರನ್ನು ಹಲ್ಲೆ ಹಾಗೂ ಸಾಕ್ಷ್ಯನಾಶ ಮಾಡಿದ ಆರೋಪದಡಿ ಬಂಧಿಸಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments