ನವದೆಹಲಿ: ಯುಪಿಐ (UPI) ಹಾಗೂ ಇತರೇ ಡಿಜಿಟಲ್ ಪೇಮೆಂಟ್‌ಗಳ ಮೂಲಕ ಹಣದ ವ್ಯವಹಾರ ಮಾಡಿದರೆ ಶುಲ್ಕ ವಿಧಿಸುವ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಗುರುವಾರ ಅಂಗೀಕಾರ ಲಭಿಸಿದೆ.
ಲೋಕಸಭೆಯಲ್ಲಿ ಗುರುವಾರ ಪಾವತಿ ಮತ್ತು ವಹಿವಾಟು ವ್ಯವಸ್ಥೆಗಳ ಕಾಯ್ದೆ 2007ನ್ನು (Payment and Settlement Systems Act, 2007) ತಿದ್ದುಪಡಿ ಮಾಡುವ ಮಸೂದೆಯನ್ನು ಅಂಗೀಕರಿಸಲಾಗಿದೆ.
ಈ ಮಸೂದೆಯ ಮೂಲಕ ಸರ್ಕಾರಕ್ಕೆ ಬ್ಯಾಂಕುಗಳು ಮತ್ತು ಇತರ ಸೇವಾ ಪೂರೈಕೆದಾರರು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ಹಾಗೂ ಇತರ ಅಧಿಸೂಚಿತ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳ ಮೇಲೆ ಶುಲ್ಕ ವಿಧಿಸಲು ಅನುಮತಿ ನೀಡುವ ಅಧಿಕಾರ ಸಿಗಲಿದೆ.
ಈ ಬದಲಾವಣೆಗಳು ತೆರಿಗೆ ಮತ್ತು ಇತರ ಕಾಯಿದೆಗಳ (ತಿದ್ದುಪಡಿ) ಮಸೂದೆ, 2026ರ ಭಾಗವಾಗಿದೆ. ಈ ಮಸೂದೆಯನ್ನು ಮಂಗಳವಾರ ಸಭೆಯಲ್ಲಿ ಪರಿಚಯಿಸಲಾಗಿತ್ತು. ಗುರುವಾರ ಮಧ್ಯಾಹ್ನ 2 ಗಂಟೆಗೆ ಸಭೆ ಪುನಃ ಆರಂಭವಾದ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಮಸೂದೆಯನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಪ್ರಸ್ತಾಪಿಸಿದರು. ಗದ್ದಲದ ನಡುವೆ ಚರ್ಚೆಯಿಲ್ಲದೆ ಧ್ವನಿ ಮತದ ಮೂಲಕ ಅದನ್ನು ಅಂಗೀಕರಿಸಲಾಯಿತು.



