ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ. ವೈ. ಮಂಜುನಾಥ ಅವರ ಮನೆ ಸೇರಿ 6 ಕಡೆ ಇಂದು ಬೆಳಗ್ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬಳ್ಳಾರಿ ಮಾಜಿ ಸಂಸದ ವೈ. ದೇವೆಂದ್ರಪ್ಪ ಪುತ್ರ ಡಾ. ವೈ. ಮಂಜುನಾಥ ಅವರ ಪತ್ನಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿ ಆಗಿದ್ದು, ಬೆಳಗಾವಿಯ ದೂರದರ್ಶನ ಕೇಂದ್ರದಲ್ಲಿರುವ ಡಾ. ವೈ. ಮಂಜುನಾಥ ಅವರ ಮನೆ ಮೇಲೆ ಗೋವಾ, ಬೆಂಗಳೂರು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಅಬಕಾರಿ ಇಲಾಖೆಯಲ್ಲಿ ಮಂಜುನಾಥ ಅವರು ಸೇವೆ ಸಲ್ಲಿಸುತ್ತಿದ್ದಾರೆ. 10ಕ್ಕೂ ಅಧಿಕ ಅರೆಸೇನಾ ಪಡೆ ಭದ್ರತೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಬೆಳಗಾವಿ, ಮೈಸೂರು, ಬೆಂಗಳೂರು, ಅರಿಸಿಕೇರೆ ಸೇರಿ ಆರು ಕಡೆ ದಾಳಿ ನಡೆಸಲಾಗಿದೆ. ಬೆಳಗಾವಿ ಮನೆ ಸೇರಿದಂತೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿರುವ ಎರಡೂ ಮನೆಗಳು, ಮೈಸೂರಲ್ಲಿರುವ ಡಾ. ವೈ. ಮಂಜುನಾಥ ಅವರ ಸ್ನೇಹಿತೆಯ ಮನೆ ಮೇಲೂ ದಾಳಿ ಮಾಡಲಾಗಿದೆ. ಬೆಂಗಳೂರಲ್ಲಿರುವ ಮಂಜುನಾಥ ಅವರಿಗೆ ಸೇರಿದ ಅಪಾರ್ಟ್ಮೆಂಟ್, ಅಥಣಿ ತಾಲೂಕಿನ ಐನಾಪುರ ಗ್ರಾಮದಲ್ಲಿನ ಸ್ನೇಹಿತನ ಮನೆ ಮೇಲೆಯೂ ದಾಳಿ ಮಾಡಲಾಗಿದೆ.
ಬೇನಾಮಿ ಹೆಸರಲ್ಲಿ ಜಮೀನು, ಬಾರ್, ರೆಸ್ಟೋರೆಂಟ್ ಸೇರಿ ಅಕ್ರಮ ಆಸ್ತಿ ಸಂಪಾದನೆ ಆರೋಪ ಕೇಳಿ ಬಂದಿದ್ದು, ಸದ್ಯ ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಡಾ. ವೈ. ಮಂಜುನಾಥ ಇದ್ದಾರೆ. ಈ ಅಪಾರ್ಟ್ಮೆಂಟ್ ಮೇಲೂ ಬೆಂಗಳೂರು ಇಡಿ ಅಧಿಕಾರಿಗಳ ದಾಳಿ ನಡೆಸಿದ್ದು, ವಿಚಾರಣೆ ಮುಂದುವರಿಸಿದೆ.



