ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ಪಾಗಲ್ ಪ್ರೇಮಿ ಹಾಡುಹಗಲೇ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಮಲ್ಲೇಶ್ವರ ಮಂತ್ರಿ ಮಾಲ್ ಹಿಂಭಾಗ ರೈಲ್ವೆ ಟ್ರಾಕ್ ಬಳಿ ಬುಧವಾರ ಈ ಘಟನೆ ನಡೆದಿದ್ದು, ಬಿಫಾರ್ಮಾ ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಕೊಲೆಯಾದ ಯುವತಿ. ಕೊಲೆ ಮಾಡಿದ ವಿಘ್ನೇಶ್ ಪರಾರಿಯಾಗಿದ್ದಾನೆ.
ಬಿ ಫಾರ್ಮ್ ವ್ಯಾಸಂಗ ಮಾಡುತ್ತಿದ್ದ ಪ್ರಿಯಾ, ಪರೀಕ್ಷೆ ಬರೆಯಲು ಬುಧವಾರ ಬೆಳಿಗ್ಗೆ 7 ಗಂಟೆಗೆ ಎದ್ದು ಕಾಲೇಜಿಗೆ ಹೋಗಿದ್ದು, ಕಾಲೇಜಿನಿಂದ ಮಧ್ಯಾಹ್ನ ಮರಳುತ್ತಿದ್ದಾಗ ಬೈಕ್ ನಲ್ಲಿ ಬಂದ ವಿಘ್ನೇಶ್ ಕಣ್ಣಿಗೆ ಖಾರದಪುಡಿ ಹಿಂಬದಿಯಿಂದ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ.
ಶ್ರೀರಾಮ ಪುರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಲವ್ ವಿಚಾರಕ್ಕೆ ಈ ಕೊಲೆ ಮಾಡಿರುವ ಸಾಧ್ಯತೆಗಳಿವೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಿಯಾ ಕುತ್ತಿಗೆ, ಮುಖಕ್ಕೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿ ಪರಿಯಾಗಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಪ್ರಿಯಾ ಸ್ಥಳದಲ್ಲೇ ಜೀವ ಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಇನ್ನು ಕೊಲೆಯಾದ ಯಾಮಿನಿ ಪ್ರಿಯಾ ತಂದೆ ಗೋಪಾಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು,ನಹಲವು ತಿಂಗಳಿನಿಂದ ನನ್ನ ಮಗಳಿಗೆ ಹಿಂಸೆ ಕೊಡುತ್ತಿದ್ದ. ಹಿಂದೆ ಹಿಂದೆ ಹಿಂಬಾಲಿಸಕೊಂಡು ಬಂದು ಪ್ರೀತಿ ಮಾಡು ಎಂದು ಒತ್ತಾಯಿಸ್ತಿದ್ದ. ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ವೆ. ಈ ಸಂಬಂಧ ಆರು ತಿಂಗಳ ಹಿಂದೆ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡಿದ್ದರು. ಮತ್ತೆ ಏನಾದ್ರೂ ಬಂದು ಟಾರ್ಚರ್ ಕೊಡುತ್ತಿದ್ದಾನಾ ಎಂದು ಒಂದು ತಿಂಗಳ ಹಿಂದೆ ಅಷ್ಟೇ ಮಗಳಿಗೆ ಕೇಳಿದ್ದೆ. ಇಲ್ಲ ಎಂದಿದ್ದಳು. ಆ ಹುಡುಗ ಏರಿಯಾದಲ್ಲಿ ಸರಿ ಇರಲಿಲ್ಲ. ಕಾಲೇಜು ಹೋಗಿ ಬರುವಾಗ ಹೀಗೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.



