ನಿವೃತ್ತಿ ಹೊಸ್ತಿಲಲ್ಲಿರುವ ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಅಡಿಲೇಡ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶೂನ್ಯ ಸುತ್ತಿದ ದಾಖಲೆ ಬರೆದರೆ, ರೋಹಿತ್ ಶರ್ಮ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ.
ಅಡಿಲೇಡ್ ನ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡ ರೋಹಿತ್ ಶರ್ಮ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕಗಳ ನೆರವಿನಿಂದ 9 ವಿಕೆಟ್ ಗೆ 264 ರನ್ ಪೇರಿಸಿತು.
ಏಕದಿನ ಸರಣಿ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ವಿರಾಟ್ ಕೊಹ್ಲಿ ಎರಡನೇ ಪಂದ್ಯದಲ್ಲೂ ಸೊನ್ನೆ ಔಟಾಗಿ ಆಘಾತಕ್ಕೆ ಒಳಗಾದರು. ಕ್ಸೇವಿಯರ್ ಬ್ರಾಟ್ ಲೆಟ್ ಎಸೆತದಲ್ಲಿ ಎಲ್ ಬಿ ಬಲೆಗೆ ಬಿದ್ದ ಕೊಹ್ಲಿ ಖಾತೆ ತೆರೆಯುವ ಮುನ್ನವೇ ನಿರ್ಗಮಿಸಿದರು.
ವಿರಾಟ್ ಕೊಹ್ಲಿ 17 ವರ್ಷಗಳ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿ ಕಾಂಗರೂ ನೆಲದಲ್ಲಿ ಸತತ 2 ಬಾರಿ ಶೂನ್ಯಕ್ಕೆ ಔಟಾದ ದಾಖಲೆ ಬರೆದರು. ಪೆವಿಲಿಯನ್ ಗೆ ಮರಳುವಾಗ ಅಭಿಮಾನಗಳತ್ತ ತಲೆ ತಗ್ಗಿಸಿ ಕೈ ಮೇಲೆ ಎತ್ತಿ ಅಭಿನಂದಿಸಿದರು. ಇದು ಕೊಹ್ಲಿ ಅವರ ಕೊನೆಯ ಸರಣಿ ಎಂಬ ಸುಳಿವಿನ ಮೇರೆಗೆ ಆಸ್ಟ್ರೇಲಿಯಾದ ಅಭಿಮಾನಿಗಳು ಎದ್ದು ನಿಂತು ಕರತಾಡನ ಮೂಲಕ ಅಭಿನಂದಿಸಿದರು.
ವಿರಾಟ್ ಕೊಹ್ಲಿ ಜೊತೆ ನಿವೃತ್ತಿಯ ಹೊಸ್ತಿಲಲ್ಲಿರುವ ರೋಹಿತ್ ಶರ್ಮ 97 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 73 ರನ್ ಬಾರಿಸಿ ಔಟಾದರೆ, ಶ್ರೇಯಸ್ ಅಯ್ಯರ್ 77 ಎಸೆತಗಳಲ್ಲಿ 7 ಬೌಂಡರಿ ಸಹಾಯದಿಂದ 61 ರನ್ ಗಳಿಸಿದರು. ಇವರಿಬ್ಬರು ಮೂರನೇ ವಿಕೆಟ್ ಗೆ 118 ರನ್ ಜೊತೆಯಾಟ ನಿಭಾಯಿಸಿದರು. ಅಕ್ಸರ್ ಪಟೇಲ್ (44) ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು.
ಕೊಹ್ಲಿ ಜೊತೆ ನಾಯಕ ಶುಭಮನ್ ಗಿಲ್ (9) ಕೂಡ ವಿಫಲರಾಗಿ ನಿರಾಸೆ ಮೂಡಿಸಿದರು. ಆಸ್ಟ್ರೇಲಿಯಾದ ಮಾರಕ ದಾಳಿಗೆ ತತ್ತರಿಸಿ ಮಧ್ಯಮ ಕ್ರಮಾಂಕದಲ್ಲಿ ಮತ್ತೆ ಕುಸಿತ ಅನುಭವಿಸಿ ಕಳಪೆ ಮೊತ್ತಕ್ಕೆ ಔಟಾಗುವ ಭೀತಿಯಲ್ಲಿತ್ತು. ಆದರೆ ಹರ್ಷಿತ್ ರಾಣ 18 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 24 ರನ್ ಬಾರಿಸಿ ತಂಡದ ಮೊತ್ತ 250ರ ಗಡಿ ದಾಟುವಂತೆ ನೋಡಿಕೊಂಡರು.



