ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಭ್ರೂಣ ಲಿಂಗ ಹತ್ಯೆ ಮಾಡುವ ಗ್ಯಾಂಗ್ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ.
ಮೈಸೂರು ತಾಲೂಕಿನ ಹನುಗನಹಳ್ಳಿಯ ಮನೆಯೊಂದರಲ್ಲಿ ಭ್ರೂಣ ಪತ್ತೆ ಹಚ್ಚಿ ಕೊಲೆ ಮಾಡುತ್ತಿದರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಆರೋಗ್ಯ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿತು.
ತೋಟದ ಮಧ್ಯೆ ಐಷಾರಾಮಿ ಮನೆಯಲ್ಲಿ ಕೃತ್ಯ ಎಸಗುತ್ತಿದ್ದ ಕಿಡಿಗೇಡಿಗಳು ಗ್ರಾಮೀಣ ಭಾಗದ ಮಹಿಳೆಯರನ್ನು ಟಾರ್ಗೆಟ್ ಮಾಡಿದ್ದರು. ಲಕ್ಷ ಲಕ್ಷ ಹಣ ಪಡೆದು ಸ್ಕ್ಯಾನಿಂಗ್ ಮಾಡುತ್ತಿದ್ದ ತಂಡವು, ಹೊಟ್ಟೆಯಲ್ಲಿರುವ ಮಗುವಿನ ಲಿಂಗವನ್ನು ಬಹಿರಂಗಪಡಿಸುತ್ತಿದ್ದರು. ನಂತರ ಹೆಣ್ಣು ಮಗುವಾದರೆ ಗರ್ಭಪಾತ ಮಾಡುವ ಕೃತ್ಯ ನಡೆಯುತ್ತಿತ್ತು. ಕೃತ್ಯಕ್ಕೆ ಬಳಸಿದ್ದ ಪರಿಕರಗಳ ಸಮೇತ ವಶ ಪಡಿಸಿಕೊಳ್ಳಲಾಗಿದೆ.
ಮಹಿಳೆಯರಿಂದ ಸಾವಿರಾರು ರೂ. ಪಡೆಯಲಾಗುತ್ತಿತ್ತು. ಲಕ್ಷಾಂತರ ರೂ. ವಹಿವಾಟು ನಡೆಸುತ್ತಿತ್ತು ಎಂಬುದು ಪತ್ತೆಯಾಗಿದೆ.
ಭ್ರೂಣದ ಲಿಂಗ ಪತ್ತೆಗಾಗಿ 25 ಸಾವಿರ ರೂ., ಹೆಣ್ಣು ಭ್ರೂಣವಾದರೆ ಹತ್ಯೆಗೆ 30 ಸಾವಿರ ರೂ. ನಿಗದಿ ಮಾಡಲಾಗಿತ್ತು. ಕೊಠಡಿಯಲ್ಲಿ ಇದ್ದ ಕಬ್ಬಿಣದ ಲಾಕರ್ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ನಗದು ಪತ್ತೆ ಆಗಿದೆ. ಸ್ಥಳದಲ್ಲಿ ಭ್ರೂಣ ಹತ್ಯೆಗೆ ಬೇಕಾದ ಕಿಟ್‌ಗಳು, ಔಷಧಿಗಳು ಪತ್ತೆಯಾಗಿದ್ದು ವಶಕ್ಕೆ ಪಡೆಯಲಾಗಿದೆ. ದಾಳಿಯ ವೇಳೆ ಲಕ್ಷಾಂತರ ರೂಪಾಯಿ ನಗದು ಹಣವನ್ನು ಬಚ್ಚಿಟ್ಟಿದ್ದನ್ನು ಪತ್ತೆ ಹಚ್ಚಲಾಗಿದೆ.
ಆರೋಗ್ಯ ಇಲಾಖೆ ಡಿಡಿ ವಿವೇಕ್, ಮಂಡ್ಯ ಡಿಎಚ್ಓ ಮೋಹನ್, ಮೈಸೂರು ಡಿಎಚ್ಓ ಪಿ.ಸಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.



