ಮಿಲೆ ಸುರ್ ಮೇರಾ ತುಮಾರಾ.. ದೂರದರ್ಶನ ಹಾಡು, ಕ್ಯಾಡ್ ಬರಿ, ಫೆವಿಕಾಲ್, ವೋಡಾಫೋನ್, ಅಬ್ ಕೀ ಬಾರ್ ಮೋದಿ ಸರ್ಕಾರ್ ಸೇರಿದಂತೆ ಹಲವು ಜನಪ್ರಿಯ ಜಾಹಿರಾತುಗಳ ಹಿಂದಿನ ರೂವಾರಿ ಜಾಹಿರಾತು ದಿಗ್ಗಜ ಎಂದೇ ಖ್ಯಾತರಾದ ಪಿಯೂಶ್ ಪಾಂಡೆ ನಿಧನರಾಗಿದ್ದಾರೆ.
ವಿಶಿಷ್ಟ ಜಾಹಿರಾತುಗಳಿಂದ ಟ್ರೆಂಡ್ ಸೃಷ್ಟಿಸುವುದಲ್ಲಿ ಖ್ಯಾತರಾಗಿದ್ದ ಪಿಯೂಶ್ ಪಾಂಡೆ ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದು, ಅವರಿಗೆ 70 ವರ್ಷ ವಯಸ್ಸಾಗಿತ್ತು. ಜಾಹಿರಾತುಗಳಿಗೆ ಹೊಸ ವ್ಯಾಖ್ಯಾನ ನೀಡಿದ ಪಿಯೂಶ್ ಅನಾರೋಗ್ಯದಿಂದ ಬಳಲುತ್ತಿದ್ದರು.
ದೇಶದ ಜನರನ್ನು ಕಲೆಯ ಮೂಲಕ ಒಗ್ಗೂಡಿಸುವ ವಿಶಿಷ್ಟ ಪ್ರಯತ್ನವಾದ ಮಿಲೆ ಸುರ್ ಮೇರಾ ತುಮಾರಾ ಹಾಡಿಗೆ ಭಿಮ್ ಸೇನ್ ಜೋಷಿ ಅವರಂತಹ ಸಂಗೀತ ಲೋಕದ ದಿಗ್ಗಜರು ಕಾಣಿಸಿಕೊಂಡಿದ್ದರು. ಹಲವು ಭಾಷೆಗಳ ಸಂಗಮವಾದ ಈ ಹಾಡಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಜನಪ್ರಿಯವಾಗಿತ್ತು.
ಪಿಯೂಶ್ ಪಾಂಡೆ ಮಾರ್ಗದರ್ಶನದಲ್ಲಿ ರಚಿಸಲಾದ ಮಿಲೆ ಸುರ್ ಮೇರಾ ತುಮಾರಾ ಜನಪ್ರಿಯತೆ ಎಷ್ಟಿತ್ತೆದಂರೆ ನಂತರ ಎರಡನೇ ಆವೃತ್ತಿಯಲ್ಲಿ ಕಮಲ್ ಹಾಸನ್, ಎಆರ್ ರೆಹಮಾನ್ ಮುಂತಾದವರನ್ನು ಒಳಗೊಂಡು ಚಿತ್ರೀಕರಣ ಮಾಡಲಾಯಿತು.
ಕ್ಯಾಡ್ ಬರಿ ಚಾಕೋಲೇಟ್ ಗಾಗಿ ಕುಚ್ ಖಾಸ್ ಹೆ (ಸ್ವಲ್ಪ ಏನೋ ವಿಶೇಷವಿದೆ), ಏಷ್ಯನ್ ಪೇಯಿಂಟ್ಸ್ ಗಾಗಿ ಹರ್ ಖುಷಿ ಲೇ ರಂಗ್ ಲಾಯೆ (ಪ್ರತಿಯೊಂದು ಖುಷಿಯಲ್ಲೂ ಬಣ್ಣ ತುಂಬಲಿ) ಮತ್ತು ವೋಡಾಫೋನ್ ನ ಬೊಂಬೆಗಳ ಜಾಹಿರಾತು ಜನಮಾನಸದಲ್ಲಿ ನೆಲೆಸಿದ್ದವು.
ಖಾಸಗಿ ಕಂಪನಿಗಳಿಗೆ ಮಾತ್ರವಲ್ಲದೇ ರಾಜಕೀಯ ಜಾಹಿರಾತುಗಳಲ್ಲೂ ಹೆಸರು ಮಾಡಿದ್ದ ಪಿಯೂಶ್ ಪಾಂಡೆ `ಅಬ್ ಕೀ ಬಾರ್ ಮೋದಿ ಸರ್ಕಾರ್’ ಸ್ಲೋಗನ್ ಅತ್ಯಂತ ಜನಪ್ರಿಯವಾಗಿದ್ದು ಮಾತ್ರವಲ್ಲ, ಮೋದಿ ಸರ್ಕಾರ ಬರಲು ಪ್ರಮುಖ ಜಾಹಿರಾತು ಕೂಡ ಆಗಿತ್ತು.
ಪಿಯೂಶ್ ಪಾಂಡೆ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಶೋಕ ವ್ಯಕ್ತಪಡಿಸಿದ್ದು, ಜಾಹಿರಾತು ಲೋಕದ ದಿಗ್ಗಜರನ್ನು ಕಳೆದುಕೊಂಡಿದ್ದೇವೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.



