ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಗಂಗಾ ಸ್ನಾನ ಮಾಡಲು ಹೋಗುವ ಆತುರದಲ್ಲಿ ರೈಲು ಹಳಿ ದಾಟುತ್ತಿದ್ದ ಮೇಲೆ ರೈಲು ಹರಿದ ಪರಿಣಾಮ 6 ಮಹಿಳೆಯರು ಮೃತಪಟ್ಟ ದಾರುಣ ಘಟನೆ ಉತ್ತಪ್ರದೇಶದ ಮಿರ್ಜಾಪುರದಲ್ಲಿ ಸಂಭವಿಸಿದೆ.
ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಚುನಾರ್ ರೈಲು ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ರೈಲು ಹಳಿ ದಾಟುವಾಗ ಏಕಾಏಕಿ ರೈಲು ಹರಿದಿದೆ. ಪ್ರಾಥಮಿಕ ವರದಿಗಳ ಪ್ರಕಾರ, 6 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಕಾರ್ತಿಕ ಪೂರ್ಣಿಮೆಯಂದು ಗಂಗಾ ಸ್ನಾನಕ್ಕೆ ಹೋಗುತ್ತಿದ್ದ ಭಕ್ತರು ಬೆಳಗ್ಗೆ 9:30ರ ಸುಮಾರಿಗೆ ರೈಲ್ವೆ ಹಳಿ ದಾಟುತ್ತಿದ್ದಾಗ ನೇತಾಜಿ ಎಕ್ಸ್‌ಪ್ರೆಸ್ (12311) ಪ್ರಯಾಣಿಕರಿಗೆ ಡಿಕ್ಕಿ ಹೊಡೆದಿದೆ.
ಚೋಪನ್ ಎಕ್ಸ್‌ಪ್ರೆಸ್‌ನಿಂದ ನಾಲ್ಕನೇ ಪ್ಲಾಟ್‌ಫಾರ್ಮ್‌ನಲ್ಲಿ ರೈಲು ಬಂದು ನಿಂತಿತ್ತು. ಈ ವೇಳೆ ಪಾದಚಾರಿ ಸೇತುವೆ ಲಭ್ಯವಿದ್ದರೂ, ಕೆಲ ಪ್ರಯಾಣಿಕರು ಹಳಿ ದಾಟಿ ಸಾಗುವ ಪ್ರಯತ್ನ ನಡೆಸಿದರು. ಈ ವೇಳೆ ನೇತಾಜಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದ್ದು, ಮಹಿಳೆಯರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರು ಕಾರ್ತಿಕ ಪೂರ್ಣಿಮೆಯ ಸ್ನಾನಕ್ಕೆ ಇಲ್ಲಿಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ.
ಘಟನೆ ಕುರಿತು ಮಾಹಿತಿ ನೀಡಿದ ಎನ್ಸಿಆರ್ ಪ್ರಯಾಗ್‌ರಾಜ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಸಿಂಗ್, ಘಟನೆಯಲ್ಲಿ ಮೂರರಿಂದ ನಾಲ್ಕು ಜನ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಈಟಿವಿ ಭಾರತ್ಕ್ಕೆ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.
ರೈಲು ಸಂಖ್ಯೆ 13309, ಚೋಪನ್ – ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್, ಉತ್ತರ ಪ್ರದೇಶದ ಚುನಾರ್ ನಿಲ್ದಾಣದ ಪ್ಲಾಟ್‌ಫಾರ್ಮ್ 4ಕ್ಕೆ ಬಂದು ನಿಂತಿತ್ತು. ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಸೇತುವೆ ಲಭ್ಯವಿದ್ದರೂ ಕೆಲ ಪ್ರಯಾಣಿಕರು ತಪ್ಪು ಬದಿಯಲ್ಲಿ ಇಳಿದು ಹಳಿಯ ಅತಿಕ್ರಮಣ ಪ್ರವೇಶ ನಡೆಸಲು ಮುಂದಾಗಿದ್ದರು. ಈ ವೇಳೆ ರೈಲು ಸಂಖ್ಯೆ 12311, ನೇತಾಜಿ ಎಕ್ಸ್‌ಪ್ರೆಸ್ ಮುಖ್ಯ ಮಾರ್ಗದಿಂದ ಹಾದು ಹೋಗುವಾಗ ಪ್ರಯಾಣಿಕರಿಗೆ ರೈಲು ಡಿಕ್ಕಿ ಹೊಡೆದಿದೆ ಎಂದು ಭಾರತೀಯ ರೈಲ್ವೆ ಹೇಳಿಕೆ ನೀಡಿದೆ.
ಘಟನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪಘಾತಕ್ಕೆ ಆಘಾತಕ ವ್ಯಕ್ತಪಡಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ.
ನಿನ್ನೆಯಷ್ಟೇ ಛತ್ತೀಸ್‌ಗಢದ ಬಿಲಾಸ್‌ಪುರ ನಿಲ್ದಾಣದ ಬಳಿ ಪ್ರಯಾಣಿಕ ರೈಲು ಸರಕು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 11 ಜನರು ಸಾವನ್ನಪ್ಪಿ, 20 ಜನರು ಗಾಯಗೊಂಡಿರುವ ಘಟನೆ ಬೆನ್ನಲ್ಲೇ ಈ ದುರ್ಘಟನೆ ವರದಿಯಾಗಿದೆ.
ಮಂಗಳವಾರ ಸಂಜೆ ಛತ್ತೀಸ್‌ಗಢದ ಬಿಲಾಸ್‌ಪುರ ನಿಲ್ದಾಣದ ಬಳಿ ಹೌರಾ- ಮುಂಬೈ ರೈಲು ಮಾರ್ಗ ವಿಭಾಗದಲ್ಲಿ ಗಟೋರಾ ಮತ್ತು ಬಿಲಾಸ್ಪುರ ರೈಲು ನಿಲ್ದಾಣಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಲೋಕೋ ಪೈಲಟ್ ಸೇರಿದಂತೆ 11 ಜನರು ಸಾವನ್ನಪ್ಪಿದ್ದರೆ, ಮಹಿಳಾ ಸಹಾಯಕ ಲೋಕೋ ಪೈಲಟ್ ಸೇರಿದಂತೆ 20 ಜನರು ಗಾಯಗೊಂಡಿದ್ದರು.



