ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ಪದಾಧಿಕಾರಿ ಸ್ಥಾನಗಳಿಗೆ ಚಂಪತ್ ರಾಯ್, ಅನಿಲ್ ಮಿಶ್ರಾ ನೀಡಿದ್ದ ರಾಜೀನಾಮೆಯಲ್ಲಿ ಅಂಗೀಕರಿಸಲಾಗಿದೆ.
ರಾಮಮಂದಿರದ ದೇಣಿಗೆ ಹಾಗೂ ಹುಂಡಿ ಹಣ ಲೂಟಿ ಪ್ರಕರಣದ ಹಿನ್ನೆಲೆಯಲ್ಲಿ ಎಸ್ ಐಟಿ ಪ್ರಾಥಮಿಕ ವರದಿ ಆಧರಿಸಿ ಸೋಮವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ಹಾಗೂ ಅಧ್ಯಕ್ಷ ಸ್ಥಾನಕ್ಕೆ ಅನಿಲ್ ಮಿಶ್ರಾ ರಾಜೀನಾಮೆ ಸಲ್ಲಿಸಿದ್ದರು. ಸಭೆಯಲ್ಲಿ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಚಂಪತ್ ರಾಯ್ ಅವರ ಸ್ಥಾನಕ್ಕೆ ಬಜರಂಗ್ ಬಾಗ್ರ ಅವರನ್ನು ಟ್ರಸ್ಟ್‌ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ರಾಮ ಮಂದಿರದ ದೇಣಿಗೆ ಹಣ ದುರುಪಯೋಗದ ಆರೋಪದ ತನಿಖೆ ಚುರುಕುಗೊಂಡ ಹಿನ್ನೆಲೆಯಲ್ಲಿ ಜೂನ್ 26ರಂದೇ ಚಂಪತ್ ರಾಯ್ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಇದಕ್ಕೂ ಒಂದು ದಿನ ಮುಂಚಿತವಾಗಿ ಪೊಲೀಸರು ಚಂಪತ್ ರಾಯ್ ಅವರ ಚಾಲಕ ಟಿನ್ನು ಸೇರಿದಂತೆ 8 ಜನರನ್ನು ಬಂಧಿಸಿದ್ದರು.
ಚಂಪತ್ ರಾಯ್ ಅವರೊಂದಿಗೆ ಟ್ರಸ್ಟ್‌ನ ಮತ್ತೊಬ್ಬ ಟ್ರಸ್ಟಿ ಅನಿಲ್ ಮಿಶ್ರಾ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಇಬ್ಬರು ನಾಯಕರ ಹೆಸರು ದೇಣಿಗೆ ಕಳ್ಳತನದ ವಿವಾದಕ್ಕೆ ಲಿಂಕ್ ಆಗಿದ್ದರೂ, ಇವರ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲ.
ಟ್ರಸ್ಟಿಗಳ ಅಸಮಾಧಾನ:
ಈ ದೇಣಿಗೆ ಕಳ್ಳತನವು ಟ್ರಸ್ಟ್‌ನ ವಿಶ್ವಾಸಾರ್ಹತೆ, ರಾಮ ಭಕ್ತರ ಭಾವನೆಗಳು ಮತ್ತು ಸಾರ್ವಜನಿಕರ ನಂಬಿಕೆಗೆ ಧಕ್ಕೆ ತಂದಿದೆ ಎಂದು ಬಹುತೇಕ ಟ್ರಸ್ಟಿಗಳು ಸಭೆಯಲ್ಲಿ ಬೇಸರ ಹೊರಹಾಕಿದ್ದಾರೆ. ಈ ವಿವಾದದ ಸುತ್ತ ಹರಡಿರುವ ಗೊಂದಲ ಮತ್ತು ತಪ್ಪು ಮಾಹಿತಿಯ ಬಗ್ಗೆ ಸದಸ್ಯರು ಕಳವಳ ವ್ಯಕ್ತಪಡಿಸಿದ್ದು, ಇದು ದೇಶಾದ್ಯಂತ ತಪ್ಪು ಸಂದೇಶವನ್ನು ರವಾನಿಸುತ್ತಿದೆ ಎಂದು ಹೇಳಿದ್ದಾರೆ.
ರಾಮ ಮಂದಿರದ ದೇಣಿಗೆ ವಿವಾದದ ಬಗ್ಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಭಕ್ತರು ತಾವು ನೀಡಿದ್ದ ಹಣ ದುರುಪಯೋಗವಾಗಿರುವ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಪ್ರಕರಣದ ತನಿಖೆಗೆ ಎಸ್ಐಟಿಯನ್ನೂ ರಚನೆ ಮಾಡಲಾಗಿದೆ. ಈ ವಿವಾದದ ಬಳಿಕ ನಡೆದ ಇಂದಿನ ಸಭೆಯು 2020ರಲ್ಲಿ ಟ್ರಸ್ಟ್ ರಚನೆಯಾದ ನಂತರದ ಅತ್ಯಂತ ಮಹತ್ವದ ಸಭೆ ಎಂದು ಪರಿಗಣಿಸಲಾಗಿದೆ.
ಚಂಪತ್ ರಾಯ್ ಗೈರು:
ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ರಾಮ ಮಂದಿರದ ಸಂಕೀರ್ಣದಲ್ಲೇ ಇದ್ದರೂ ಸಭೆಗೆ ಹಾಜರಾಗಿರಲಿಲ್ಲ. ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಅವರು ಕರೆದಿದ್ದ ಈ ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ವಹಿಸಿದ್ದರು. ಸಭೆಯಲ್ಲಿ ಹಿರಿಯ ಟ್ರಸ್ಟಿಗಳು, ಸರ್ಕಾರದ ಪ್ರತಿನಿಧಿಗಳು ಮತ್ತು ಕಾನೂನು ತಜ್ಞರು ಭಾಗವಹಿಸಿದ್ದರು.
ಪ್ರಸ್ತುತ ಎಸ್‌ಐಟಿ ಮತ್ತು ಪೊಲೀಸರು ಈ ದೇಣಿಗೆ ಹಗರಣದ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿ ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆಯಾದರೂ, ಇವರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.



