Sunday, July 5, 2026
Google search engine
Homeರಾಜ್ಯಮೊಬೈಲ್ ಟಾರ್ಚ್ ಬೆಳಕಲ್ಲಿ 90 ಕಿ.ಮೀ. ಬಸ್ ಚಲಾಯಿಸಿದ ಸಾಹಸಿ ಕೆಎಸ್ಸಾರ್ಟಿಸಿ ಚಾಲಕ!

ಮೊಬೈಲ್ ಟಾರ್ಚ್ ಬೆಳಕಲ್ಲಿ 90 ಕಿ.ಮೀ. ಬಸ್ ಚಲಾಯಿಸಿದ ಸಾಹಸಿ ಕೆಎಸ್ಸಾರ್ಟಿಸಿ ಚಾಲಕ!

ಬಸ್ ಹೆಡ್ ಲೈಟ್ ಇಲ್ಲದ ಕಾರಣ ಮೊಬೈಲ್ ಟಾರ್ಚ್ ಬೆಳಕಲ್ಲಿ 90 ಕಿ.ಮೀ.ದೂರ ಕೆಎಸ್ಸಾರ್ಟಿಸಿ ಬಸ್ ಅನ್ನು ಚಾಲಕ ಚಲಾಯಿಸಿದ ಆಘಾತಕಾರಿ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಲಬುರಗಿಯಿಂದ ಚಿಂಚೋಳಿಗೆ ಬರುವ ಬಸ್ಸಿನ ಹೆಡ್‌ಲೈಟ್‌ನ ಮಂದ ಬೆಳಕಿನ ಕಾರಣ ಮೊಬೈಲ್ ಟಾರ್ಚ್ ಹಾಕಿಕೊಂಡು ಓಡಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ರಾತ್ರಿ 7.30ಕ್ಕೆ ಕಲಬುರಗಿಯಿಂದ ಹೊರಟ ಬಸ್ ತಡರಾತ್ರಿ ಚಿಂಚೋಳಿ ತಲುಪಿತು. ಬಸ್ಸಿನಲ್ಲಿ 8 ಜನ ಪ್ರಯಾಣಿಕರಿದ್ದರು ಎನ್ನಲಾಗಿದೆ. ಈ ಬಸ್ ಕಳೆದ ಮೂರು ದಿನಗಳಿಂದ ಇದೇ ಸ್ಥಿತಿಯಲ್ಲಿ ಓಡಿಸುತ್ತಿರುವುದು ಗೋಚರಿಸಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

‘ಕಲಬುರಗಿಯಿಂದ ಚಿಂಚೋಳಿಗೆ ಬರುವ ದಿನದ ಕಡೆಯ(ಲಾಸ್ಟ್) ಬಸ್ ಇದಾಗಿದ್ದು, ನಿತ್ಯ ಸಂಚರಿಸುವವರು ಇದೇ ಬಸ್ ಅವಲಂಬಿಸಿದ್ದಾರೆ. ಆದರೆ, ಬಸ್ಸಿನ ಸ್ಥಿತಿಮಾತ್ರ ಅಯೋಮಯವಾಗಿದೆ’ ಎಂದು ಪ್ರಯಾಣಿಕರಾದ ಪತ್ರಕರ್ತ ಅಕ್ರಮ ಮೋಮಿನ್ ಹಾಗೂ ನಂದಕುಮಾರ ಅವುಂಟಗಿ ತಿಳಿಸಿದ್ದಾರೆ.

‘ಕಲಬುರಗಿಯಿಂದ ಚಿಂಚೋಳಿಗೆ ಬರುವ ಲಾಸ್ಟ್ ಬಸ್ಸಿನ ಲೈಟ್ ಮಂದವಾಗಿ ಬೆಳಗುತ್ತಿರುವುದರಿಂದ ನಿರ್ವಾಹಕನ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಚಿಂಚೋಳಿಗೆ ಬಸ್ ಓಡಿಸಿಕೊಂಡು ಬರುತ್ತಿರುವುದು ಗಮನಕ್ಕೆ ಬಂದಿದೆ. ಬಸ್ಸಿನ ಹೆಡ್‌ಲೈಟ್ ತಂತಿಗಳ ಜೋಡಣೆಯಲ್ಲಿ ದೋಷವಿತ್ತು. ಸರಿಪಡಿಸಿದ್ದೇವೆ. ಆದರೆ, ಶನಿವಾರ ಲೈಟ್‌ಗಳು ಬೆಳಗದೇ ಇರುವ ಕುರಿತು ಪ್ರಯಾಣಿಕರೇ ವಿಡಿಯೊ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ನೋಡಿ ಸಂಸ್ಥೆಯ ಉನ್ನತ ಅಧಿಕಾರಿಗಳು ನನ್ನೊಂದಿಗೆ ಮಾತನಾಡಿದ್ದಾರೆ. ನಾಳೆಯಿಂದ ಈ ಬಸ್ ಬದಲಿಸಿ ಬೇರೆ ಬಸ್ ಹಾಕುತ್ತೇನೆ’ ಎಂದು ಘಟಕ ವ್ಯವಸ್ಥಾಪಕ ಸುರೇಶ ತೇಗಲತಿಪ್ಪಿ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರಕ್ಕೆ ಶೋಭೆ ತರಲ್ಲ

‘ಮೊಬೈಲ್ ಟಾರ್ಚ್ ಬೆಳಿಕಿನಲ್ಲಿ ಬಸ್ ಓಡಿಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಹೋರಾಟಗಾರ ಮಾರುತಿ ಗಂಜಗಿರಿ ದೂರಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಿಂದ ಖರೀದಿಸಿದ ಬಸ್‌ಗಳನ್ನು ಕಲ್ಯಾಣ ಕರ್ನಾಟಕದ ಎಲ್ಲಾ ಘಟಕಗಳಿಗೆ ನೀಡಲಾಗಿದೆ. ಆದರೆ, ಚಿಂಚೋಳಿ ಮತಕ್ಷೇತ್ರದ ವ್ಯಾಪ್ತಿಯ ಘಟಕಗಳಿಗೆ ನೀಡದೇ ಮಲತಾಯಿ ಧೋರಣೆ ತಾಳಲಾಗಿದೆ. ಇದರಿಂದ ಅಧಿಕಾರಿಗಳು ಗುಜರಿಗೆ ಹಾಕುವ ಬಸ್ ಓಡಿಸುವುದು ಅನಿವಾರ್ಯವಾಗಿದ್ದು, ಪ್ರಯಾಣಿಕರು ಹಿಡಿ ಶಾಪಹಾಕುತ್ತಲೇ ಪ್ರಯಾಣಿಸುವ ದುಸ್ಥಿತಿ ಎದುರಾಗಿದೆ ಎಂದು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಮರೆಡ್ಡಿ ಪಾಟೀಲ ಆರೋಪಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments