ಆನೆ ದಾಳಿಯಿಂದ ಪಾರಾಗಿದ್ದ ರೈತ ಹುಲಿ ದಾಳಿಗೆ ಬಲಿಯಾದ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಹಳೇ ಹೆಗ್ಗುಡಿಲು ಗ್ರಾಮದಲ್ಲಿ ನಡೆದಿದೆ.
ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ರೈತ ಹೆಗ್ಗುಡಿಲು ಗ್ರಾಮದ ನಿವಾಸಿ ಚೌಡನಾಯಕ (40) ಬಲಿಯಾಗಿದ್ದಾನೆ.
ಶುಕ್ರವಾರ ಬೆಳಗ್ಗೆ ತಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾಗ ಹಿಂದಿನಿಂದ ಬಂದ ಹುಲಿ ದಾಳಿ ಮಾಡಿ ಎಳೆದೊಯ್ದಿದ್ದು, ಹಳ್ಳವೊಂದರಲ್ಲಿ ಹುಲಿ ತಿಂದು ಬಿಸಾಡಿರುವ ರೀತಿ ಮೃತದೇಹ ಪತ್ತೆಯಾಗಿದೆ.
ಕಳೆದ ವರ್ಷ ಜಮೀನಿನಲ್ಲಿ ಕೆಲಸ ಮಾಡುವಾಗ ಆನೆ ದಾಳಿ ವೇಳೆ ಚೌಡನಾಯಕನ ಸೊಂಟ ಮುರಿದಿತ್ತು. ನಂತರ ಚೇತರಿಸಿಕೊಂಡು ಮೂರು ತಿಂಗಳಿನಿಂದ ಜಮೀನಿಗೆ ಹೋಗಿ ಮತ್ತೆ ಕೆಲಸ ಮಾಡುತ್ತಿದ್ದರು.
ಚೌಡನಾಯಕ ಪತ್ನಿ ರುಕ್ಮಿಣಿ, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಸ್ಥಳಕ್ಕೆ ಹೆಡಿಯಾಲ ಎಸಿಎಫ್ ಪರಮೇಶ್, ಆರ್ಎಪ್ಒ ಅಮೃತ, ಅರಣ್ಯ ಸಿಬ್ಬಂದಿ ಭೇಟಿ ಮಾಡಿ ಪರಿಶೀಲನೆ ನಡೆಸಿದರು.
ಓಡಿ ಬಂದಿದ್ದ ಎತ್ತುಗಳು
ಚೌಡನಾಯಕರನ್ನು ಹುಲಿ ಎಳೆದೊಯ್ದಾಗ ಅಲ್ಲಿದ್ದ ಎತ್ತುಗಳು ಗಾಬರಿಯಿಂದ ರೈತನ ಮನೆಗೆ ಓಡಿ ಬಂದಿದ್ದವು. ಇದರಿಂದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆತಂಕಗೊಂಡು ಜಮೀನಿನತ್ತ ಬಂದಿದ್ದರು. ಚೌಡನಾಯಕ ಕಾಣದೇ ಇದ್ದಾಗ ಹುಡುಕಾಟ ನಡೆಸಿದ್ದರು. ನಂತರ ಹಳ್ಳವೊಂದರಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಗ್ರಾಮಸ್ಥರಾದ ನವೀನ್ ಮಾಹಿತಿ ನೀಡಿದ್ದಾರೆ./
ಹುಲಿಗೆ ಎರಡನೇ ಬಲಿ
ಬಣ್ಣೆಗೆರೆ ಗ್ರಾಮದ ರಾಜಶೇಖರ್ ಹಾಗೂ ಕುರ್ಣೇಗಾಲ ಗ್ರಾಮದ ದೊಡ್ಡನಿಂಗಯ್ಯ ಎಂಬವರು ಹುಲಿ ದಾಳಿಗೆ ಬಲಿಯಾಗಿದ್ದಾರೆ. ಇದೀಗ ಚೌಡನಾಯಕ ಎಂಬ ರೈತ ಮೃತಪಟ್ಟಿದ್ದಾನೆ. ಈ ಮೂಲಕ ಹುಲಿ ದಾಳಿಗೆ ಮೂವರು ಪ್ರಾಣ ಕಳೆದುಕೊಂಡಂತಾಗಿದೆ.
ಇದಕ್ಕೂ ಮೊದಲು ಸರಗೂರು ಬಡಗಲಪುರ ಗ್ರಾಮದಲ್ಲಿ ಮಹದೇವ ಮಾದೇಗೌಡ ಎಂಬವರು ಹುಲಿ ದಾಳಿಯಿಂದ ಕಣ್ಣುಗಳನ್ನು ಕಳೆದುಕೊಂಡು ಗಂಭೀರವಾಗಿ ಗಾಯಗೊಂಡಿದ್ದರು.
ನಂಜನಗೂಡಿನಲ್ಲಿ ಹುಲಿಗೆ ಬಲಿ
ನಂಜನಗೂಡು ತಾಲೂಕಿನ ಹೆಡಿಯಾಲ ಹೋಬಳಿಯ ಮುಳ್ಳೂರುಹುಂಡಿ-ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ಟೊಮೆಟೊ ಬಿಡಿಸಲು ಹೋಗಿದ್ದ ವೇಳೆ ರೈತ ರಾಜಶೇಖರ್ (55) ಹುಲಿ ದಾಳಿಯಿಂದ ಮೃತಪಟ್ಟಿದ್ದರು. ಕೂಡಗಿ ಗ್ರಾಮದ ದೊಡ್ಡನಿಂಗಯ್ಯ (65) ಕಾಡಂಚಿನ ಜಮೀನೊಂದರಲ್ಲಿ ಮೇಕೆಗಳನ್ನು ಮೇಯಿಸುವಾಗ ಹುಲಿ ದಾಳಿ ಮಾಡಿತ್ತು.
ಅ.16ರಂದು ಹುಲಿ ದಾಳಿಯಲ್ಲಿ ಬಡಗಲಪುರ ಗ್ರಾಮದ ರೈತ ಮಹಾದೇವ (ಮಾದೇಗೌಡ) ಗಂಭೀರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ.


