ಭಾರತದ ಜೊತೆ ಪೂರ್ಣ ಪ್ರಮಾಣದಲ್ಲಿ ಯುದ್ಧ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದ್ದರಿಂದ ದೇಶದಲ್ಲಿ ಹೈ ಅಲರ್ಟ್ ಮುಂದುವರಿದಿದೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಅಲಿಫ್ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸಮಾ ಟೀವಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ನಾವು ಭಾರತವನ್ನು ಯಾವುದೇ ರೀತಿಯಲ್ಲಿ ಕಡೆಗಣಿಸುವುದಿಲ್ಲ ಅಥವಾ ಅವರನ್ನು ನಂಬುವ ಸ್ಥಿತಿಯಲ್ಲೂ ಇಲ್ಲ. ಭಾರತ ಯಾವುದೇ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಯುದ್ಧ ಘೋಷಿಸಬಹುದು. ಆಫ್ಘಾನಿಸ್ತಾನದ ಮೂಲಕ ಒಳನುಸುಳಿ ದಾಳಿ ಕೂಡ ಮಾಡಬಹುದು. ಆದ್ದರಿಂದ ನಾವು ಹೈ ಅಲರ್ಟ್ ನಲ್ಲಿ ಇದ್ದೇವೆ ಎಂದರು.
ಭಾರತದ ಆರ್ಮಿ ಸ್ಟಾಫ್ ಜನರಲ್ ಉಪೇಂದ್ರ ದ್ವಿವೇದಿ, ಪಾಕಿಸ್ತಾನ ವಿರುದ್ಧ ನಡೆದ ಆಪರೇಷನ್ ಸಿಂಧೂರ್ 88 ಗಂಟೆಗಳ ಟ್ರೇಲರ್ ಎಂಬ ಹೇಳಿಕೆ ಬೆನ್ನಲ್ಲೇ ಪಾಕಿಸ್ತಾನದ ರಕ್ಷಣಾ ಸಚಿವರ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಪಾಕಿಸ್ತಾನದ ಮೇಲೆ ದಾಳಿ ನಡೆದ ಕೆಲವೇ ತಿಂಗಳ ನಂತರ ದೆಹಲಿಯ ಕೆಂಪುಕೋಟೆ ಬಳಿ ಉಗ್ರರು ಕಾರು ಸ್ಫೋಟಿಸಿದ್ದರಿಂದ 15 ಮಂದಿ ಮೃತಪಟ್ಟಿದ್ದರು. ಪೆಹಲ್ಗಾಮ್ ದಾಳಿ ನಂತರ ಭಾರತದಲ್ಲಿ ನಡೆದ ಅತೀ ದೊಡ್ಡ ದಾಳಿ ಇದಾಗಿತ್ತು.



