ಬೆಂಗಳೂರಿನ ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ಹೊಡೆದಾಡಿಕೊಂಡ ನೇಪಾಳ ಮೂಲದ 11 ಮಂದಿ ಆರೋಪಿಗಳನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ನೇಪಾಳದ ಉಪೇಂದ್ರ ಚೌಲಗಾಯ್, ಮನೋಜ್ ಶಾಹಿ, ಚವಿ ಖತ್ರಿ, ಸುದೀಪ್ ಅಧಿಕಾರಿ, ದಿನೇಶ್ ಕುನ್ವಾರ್, ಗೋಪಾಲ್ ಕ್ಸೆತ್ರಿ, ಧರ್ಮೇಂದರ್, ರಾಹುಲ್ ಸಿಂಗ್, ನಿರ್ಮಲ್, ಮನೋಜ್ ಕಠಾಯುತ್ ಹಾಗೂ ಪರಶ್ ಬೊಹ್ರಾ ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಭಾನುವಾರ ಸಂಜೆ ವಿಧಾನಸೌಧದ ಮುಂದಿನ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಇದ್ದಕ್ಕಿದ್ದಂತೆ ಸಿಕ್ಕ ಸಿಕ್ಕ ವಸ್ತುಗಳಿಂದ ಬಡಿದಾಡಿಕೊಂಡಿದ್ದರು. ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಬೀಟ್ ಸಿಬ್ಬಂದಿ ಕೂಡಲೇ ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ಗುಂಪನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಿಸಿದ್ದರು.
ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಭದ್ರತೆಯ ಕುರಿತು ಟೀಕೆಗಳು ವ್ಯಕ್ತವಾಗಿದ್ದವು. ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ.ಹಕೇ ಮಾತನಾಡಿ “ಅಂಬೇಡ್ಕರ್ ಬೀದಿಯಲ್ಲಿರುವ ಮೆಟ್ರೋ ಸ್ಟೇಷನ್ ಸಮೀಪ ಒಂದಷ್ಟು ಹುಡುಗರು ಹೊಡೆದಾಡಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಎಂದರು.
ಘಟನೆಯನ್ನು ಪರಿಶೀಲನೆ ಮಾಡುವಾಗ ಎರಡು ಗುಂಪುಗಳ ನಡುವೆ ಗಲಾಟೆ ಆಗಿರುವುದು ಗಮನಕ್ಕೆ ಬಂತು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಲ್ಲಿ ಭಾಗಿಯಾದವರನ್ನು ಗುರುತಿಸಿದ್ದೇವೆ. ದಸ್ತಗಿರಿ ಮಾಡುವ ಕ್ರಮವನ್ನು ಜರುಗಿಸಿದ್ದೇವೆ. ಎಸಿಪಿ ಕಬ್ಬನ್ ಪಾರ್ಕ್ ಅವರ ನೇತೃತ್ವದಲ್ಲಿ ಐದು ಪ್ರತ್ಯೇಕ ತಂಡಗಳನ್ನು ಮಾಡಿದ್ದೆವು. ಅಶೋಕನಗರ, ವಿಧಾನಸೌಧ, ಕಬ್ಬನ್ಪಾರ್ಕ್ನ ಎಲ್ಲ ಅಧಿಕಾರಿಗಳು ಭಾಗವಹಿಸಿ ಬೇರೆ ಬೇರೆ ದಿಕ್ಕಿನಲ್ಲಿದ್ದ ಇವರೆಲ್ಲರನ್ನು ಗುರುತಿಸಿ ದಸ್ತಗಿರಿ ಮಾಡುವ ಕ್ರಮ ಕೈಗೊಂಡಿದ್ದೇವೆ” ಎಂದು ಅವರು ತಿಳಿಸಿದರು.
ಎರಡು ಗುಂಪುಗಳ ನಡುವೆ ಗಲಾಟೆ ಆಗಿರುವುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಇವರಿಗೆ ರೀಲ್ಸ್ ಮಾಡುವ ಹುಚ್ಚಿತ್ತು. ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸೇರಿದಂತೆ ನಗರದ ವಿವಿಧೆಡೆ ಶಾರ್ಟ್ ವಿಡಿಯೋಗಳನ್ನು ಮಾಡುತ್ತಿದ್ದ ಆರೋಪಿಗಳು ಅವುಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಳ್ಳುವ ಮೂಲಕ ಹೆಚ್ಚಿನ ಲೈಕ್ಸ್, ಫಾಲೋವರ್ಸ್ ಹೊಂದುತ್ತಿದ್ದರು. ಹೀಗಾಗಿ, ಒಂದು ಗುಂಪು ವಿಧಾನಸೌಧದ ಬಳಿಗೆ ಬಂದಿತ್ತು ಎಂದು ಅವರು ಹೇಳಿದರು.
“ಈ ವೇಳೆ ಇನ್ನೊಂದು ಗುಂಪು ಇವರು ರೀಲ್ಸ್ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿ ಒಬ್ಬರಿಗೊಬ್ಬರು ಮಾತನಾಡಿಕೊಂಡು ಕಬ್ಬನ್ ಪಾರ್ಕ್ ಬಳಿಗೆ ಬನ್ನಿ ಎಂದು ಕರೆಸಿಕೊಂಡಿದ್ದಾರೆ. ಒಂದು ತಿಂಗಳ ಹಿಂದೆ ಒಬ್ಬರಿಗೊಬ್ಬರು ಮೊಬೈಲ್ ಕೊಡುವ ತೆಗೆದುಕೊಳ್ಳುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಒಂದು ಕೇಸ್ ದಾಖಲಿಸಿ ನಾಲ್ವರನ್ನು ಬಂಧಿಸಿದ್ದೆವು. ಹೀಗಾಗಿ, ಅವರು ನಮ್ಮ ಮೇಲೆ ಕೇಸ್ ಕೊಟ್ಟು ಅರೆಸ್ಟ್ ಮಾಡಿಸಿದ್ದೀರಿ ಹಾಗೂ ಕಬ್ಬನ್ಪಾರ್ಕ್ನಲ್ಲಿ ನಮ್ಮ ಕಡೆಯ ಹುಡುಗಿಯನ್ನು ಚುಡಾಯಿಸಿದ್ದೀರಿ ಎಂದು ಇನ್ನೊಂದು ಗುಂಪಿನೊಂದಿಗೆ ಗಲಾಟೆ ಮಾಡಲು ಬಂದಿದ್ದರು” ಎಂದು ಮಾಹಿತಿ ನೀಡಿದರು.



