ರಾಯಚೂರು: ಹೃದಯಾಘಾತಕ್ಕೆ ಒಳಗಾದ ಕಲ್ಯಾಣ ಕರ್ನಾಟಕ ಭಾಗದ ಹಾಗೂ ಕಲಬುರಗಿ ವಿಭಾಗದ ಪ್ರಸಿದ್ಧ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ 49ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.
ರಾಯಚೂರಿನ ತಿಂಥೀಣಿ ಬ್ರಿಡ್ಜ್ ಬಳಿಯ ಕನಕಗುರು ಪೀಠದ ಪೀಠಾಧಿಪತಿಗಳಾಗಿದ್ದ ಸ್ವಾಮೀಜಿಗೆ ಗುರುವಾರ ಬೆಳಿಗ್ಗೆ 3-40ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಲಿಂಗಸೂಗೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ದೈವಾಧೀನರಾಗಿದ್ದಾರೆ.
ಮೂಲತಃ ಚಿತ್ರದುರ್ಗ ಜಿಲ್ಲೆಯ ಕಲಮರಹಳ್ಳಿಯ ಸ್ವಾಮೀಜಿಯವರು, ಮಹದೇವಯ್ಯ ಮತ್ತು ಜಯಮ್ಮ ದಂಪತಿಯ 2ನೇ ಪುತ್ರರಾಗಿ ಜನಿಸಿದ್ದರು. ಮೋಹನ್ ಇವರ ಮೊದಲ ಹೆಸರು. ಆಧ್ಯಾತ್ಮಿಕ ಹಸಿವಿನಿಂದ 18ನೇ ವಯಸ್ಸಿಗೆ ಮನೆ ಬಿಟ್ಟು ಸಂಚಾರ ಆರಂಭಿಸಿದ್ದರು. ಮೊದಲು ಜೈನ, ಕ್ರೈಸ್ತ, ಬ್ರಹ್ಮಕುಮಾರಿ ಪಂಥಗಳ ಭಾವಕ್ಕೆ ಒಳಗಾಗಿದ್ದ ಸ್ವಾಮೀಜಿ, ಶರಣ ಸಾಹಿತ್ಯದ ಜೊತೆಗೆ ಎಲ್ಲ ಧರ್ಮಗಳ ಅಧ್ಯಯನ ಮಾಡಿದ್ದರು.
ಚಿತ್ರದುರ್ಗದ ಮುರುಘಾಮಠದಲ್ಲಿ ಅಧ್ಯಯನ ಮಾಡಿದ ಬಳಿಕ 4 ವರ್ಷಗಳ ಕಾಲ ಸಿಂಧನೂರಿನಲ್ಲಿ ವಾಸ್ತವ್ಯ ಹೂಡಿದ್ದರು. 2011ರಲ್ಲಿ ಕನಕಗುರು ಪೀಠಕ್ಕೆ ಬಂದ ಸಿದ್ದರಾಮನಂದ ಸ್ವಾಮೀಜಿ, ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಣಿ ಬ್ರೀಡ್ಜ್ ಬಳಿ ಕಲಬುರಗಿ ವಿಭಾಗದ ಕನಕ ಗುರು ಪೀಠ ಶುರು ಮಾಡಿದರು.
ಪ್ರತಿ ವರ್ಷ ಜನವರಿ 12,13,14 ಹಾಲುಮತ ಸಂಸ್ಕೃತಿ ವೈಭವ ಆಚರಣೆ ಮಾಡುತ್ತಿದ್ದರು. ಈ ವೈಭವ ಕಾರ್ಯಕ್ರಮಕ್ಕೆ ಸಿಎಂ ಸೇರಿದಂತೆ ರಾಜ್ಯದ ಬಹುತೇಕ ಗಣ್ಯರು ಆಗಮಿಸುತ್ತಿದ್ದರು. ಕನಕ ಪೀಠದಲ್ಲಿ ಪ್ರಾಥಮಿಕ ಶಾಲೆಯಿಂದ ಪಿಯುವರೆಗೂ ಶಿಕ್ಷಣ ಪ್ರಾರಂಭಿಸಿ, ಶಾಲಾ ಮಕ್ಕಳಿಗೆ ಉಚಿತ ದಾಸೋಹದ ವ್ಯವಸ್ಥೆ ಮಾಡಿದ್ದರು.
ಬಾಗಲಕೋಟೆ ಜಿಲ್ಲೆಯ ಗುಡೂರಿನಲ್ಲಿ ಪದವಿ ಕಾಲೇಜು, ಮುದ್ದೇಬಿಹಾಳದಲ್ಲಿ ಪದವಿ ಕಾಲೇಜು, ಕೊಪ್ಪಳ ಜಿಲ್ಲೆಯ ಹಾಲವರ್ತಿ ಹಾಗೂ ಕುಷ್ಟಗಿ ತಾಲೂಕಿನ ಬಾದಿಮನಾಳದಲ್ಲಿ ಶಾಖಾಮಠ ಸ್ಥಾಪನೆ, ಕನಕಗುರು ಪೀಠದಲ್ಲಿ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ರಕ್ತದಾನ ಆಯೋಜಿಸುತ್ತಿದ್ದರು. ಪ್ರತಿ ವರ್ಷ ಸಾಹಿತ್ಯ, ಸಮಾಜಸೇವೆ ಮಾಡಿದ ಗಣ್ಯರಿಗೆ ಭಾಸ್ಕರ, ಕನಕರತ್ನ, ಸಿದ್ಧ ಶ್ರೀ ಪ್ರಶಸ್ತಿ ನೀಡಲಾಗುತ್ತಿತ್ತು. ಕಳೆದ 12ರಿಂದ 14 ರವರೆಗೆ ಹಾಲುಮತ ಉತ್ಸವವನ್ನು ಆಯೋಜಿಸಿದ್ದರು. ಇದರೊಂದಿಗೆ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದರು.
ತಿಂಥಣಿಯಲ್ಲಿಂದು ಹಾಲುಮತದ ಪದ್ಧತಿಯಂತೆ ಸ್ವಾಮೀಜಿ ಅಂತ್ಯಕ್ರಿಯೆಯನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಭಕ್ತರಿಗೆ, ಗಣ್ಯರಿಗೆ ಹಾಗೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ. ಹಲವು ಗಣ್ಯರು ಬರುವ ಸಾಧ್ಯತೆಯಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಸ್ವಾಮೀಜಿಗಳ ನಿಧನದ ಬಗ್ಗೆ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಮಾಜಿ ಸಂಸದ ಕೆ ವಿರೂಪಾಕ್ಷಪ್ಪ ಮುಂತಾದ ಗಣ್ಯರು ಕಂಬನಿ ಮಿಡಿದಿದ್ದಾರೆ.



