ಬೆಂಗಳೂರು: ಉತ್ತರಪ್ರದೇಶವು ಪ್ರಸ್ತುತದಲ್ಲಿ ಹೂಡಿಕೆ ಮಾಡಲು ಹೇಳಿ ಮಾಡಿಸಿದ ರಾಜ್ಯವಾಗಿ ಹೊರಹೊಮ್ಮುತ್ತಿದ್ದು ಹಲವು ಕ್ಷೇತ್ರಗಳ ಕೈಗಾರಿಕೋದ್ಯಮಿಗಳು ಹೂಡಿಕೆ ಮಾಡಿ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಉತ್ತರಪ್ರದೇಶ ಸರ್ಕಾರದ ವತಿಯಿಂದ ಆಯೋಜಿಸಲಾಗಿದ್ದ ಜಾಗತಿಕ ಹೂಡಿಕೆದಾರರ ರೋಡ್ ಶೋ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮದು ಡಬಲ್ ಇಂಜಿನ್ ಸರ್ಕಾರವಾಗಿದ್ದು ಹೂಡಿಕೆದಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಈ ನಿಟ್ಟಿನಲ್ಲಿ ಹೂಡಿಕೆದಾರರಿಗೆ ಎಲ್ಲಾ ತರಹದ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟು ಉದ್ಯಮ ಬೆಳವಣಿಗೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಒಮ್ಮೆ ಹಿಂದುಳಿದ ಮತ್ತು ಹೂಡಿಕೆದಾರರಿಗೆ ಆಕರ್ಷಕವಲ್ಲದ ರಾಜ್ಯವೆಂದು ಪರಿಗಣಿಸಲ್ಪಟ್ಟ ಉತ್ತರಪ್ರದೇಶ ಇಂದು ಭಾರತದ ಟಾಪ್ 3 ಆರ್ಥಿಕತೆಗಳಲ್ಲಿ ಒಂದಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಉತ್ತರ ಪ್ರದೇಶದ ಆರ್ಥಿಕತೆ ಮೂರು ಪಟ್ಟು ಹೆಚ್ಚಾಗಿದ್ದು, ತಲಾ ಆದಾಯವೂ 3 ಪಟ್ಟು ಏರಿಕೆಯಾಗಿದೆ. ಉತ್ತಮ ಕಾನೂನು ಸುವ್ಯವಸ್ಥೆ, ಪಾರದರ್ಶಕ ಆಡಳಿತ ಮತ್ತು ವಿಶ್ವಮಟ್ಟದ ಮೂಲಸೌಕರ್ಯಗಳ ಮೂಲಕ ರಾಜ್ಯವು ಹೂಡಿಕೆದಾರರಿಗೆ ಅತ್ಯುತ್ತಮ ತಾಣವಾಗಿ ರೂಪುಗೊಂಡಿದೆ ಎಂದರು.
ಭಾರತವು 5 ಟ್ರಿಲಿಯನ್ ಆರ್ಥಿಕತೆ ಸಾಧಿಸುವ ಗುರಿ ಇಟ್ಟುಕೊಂಡಿದ್ದರೆ, ಉತ್ತರಪ್ರದೇಶ ರಾಜ್ಯವು 1 ಟ್ರಿಲಿಯನ್ ಆರ್ಥಿಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ವಿಕಸಿತ ಭಾರತಕ್ಕಾಗಿ ಉತ್ತರಪ್ರದೇಶ ಶ್ರಮಿಸುತ್ತಿದೆ. ಹಾಗಾಗಿ ಹೂಡಿಕೆ ಮಾಡಲು ಹಲವು ಕ್ಷೇತ್ರಗಳ ಉದ್ಯಮಿಗಳು ಉತ್ತರಪ್ರದೇಶಕ್ಕೆ ಆಗಮಿಸಿ ಎಂದು ಮನವಿ ಮಾಡಿದರು.
ಎಲ್ಲಾ ಹೂಡಿಕೆದಾರರಿಗೂ ಬೇಕಾದ ಸೌಲಭ್ಯ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡುತ್ತೇವೆ. ವ್ಯಾಪಾರ ಸ್ನೇಹಿ ವಾತಾವರಣ ಕಲ್ಪಿಸಿ ಕೊಡುವತ್ತಾ ಗಮನ ಹರಿಸಲು ಮುಂದಾಗುತ್ತೇವೆ ಎಂದು ತಿಳಿಸಿದರು.
ಮೂಲಸೌಕರ್ಯದಲ್ಲಿ ಉತ್ತರ ಪ್ರದೇಶದ ಸಾಧನೆ
ಉತ್ತರ ಪ್ರದೇಶ ಇಂದು ದೇಶದಲ್ಲೇ ಅತಿ ಹೆಚ್ಚು ಎಕ್ಸ್‌ಪ್ರೆಸ್‌ವೇಗಳನ್ನು ಹೊಂದಿರುವ ರಾಜ್ಯವಾಗಿದೆ. ದೇಶದ ಒಟ್ಟು ಎಕ್ಸ್‌ಪ್ರೆಸ್‌ವೇ ಜಾಲದ ಸುಮಾರು 60 ಪ್ರತಿಶತ ಭಾಗ ರಾಜ್ಯದಲ್ಲಿದೆ. ರಾಜ್ಯದಲ್ಲಿ 16 ಸಾವಿರ ಕಿ.ಮೀ ಉದ್ದದ ರೈಲ್ವೆ ಜಾಲ ಹಾಗೂ 4 ಲಕ್ಷ ಕಿ.ಮೀ ರಸ್ತೆ ಜಾಲವಿದೆ. ಏಳು ನಗರಗಳಲ್ಲಿ ಮೆಟ್ರೋ ರೈಲು ಸೇವೆ ಕಾರ್ಯನಿರ್ವಹಿಸುತ್ತಿದ್ದು, ಪೂರ್ವ ಮತ್ತು ಪಶ್ಚಿಮ ಸಮರ್ಪಿತ ಸರಕು ಸಾಗಣೆ ಕಾರಿಡಾರ್‌ಗಳು ರಾಜ್ಯದ ಮೂಲಕ ಹಾದು ಹೋಗುತ್ತಿವೆ. ಇತ್ತೀಚೆಗೆ ರಾಷ್ಟ್ರಕ್ಕೆ ಸಮರ್ಪಿಸಲಾದ ಗಂಗಾ ಎಕ್ಸ್‌ಪ್ರೆಸ್‌ವೇ ದೇಶದ ಅತಿದೊಡ್ಡ ಎಕ್ಸ್‌ಪ್ರೆಸ್‌ವೇ ಆಗಿದ್ದು, ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿ ಅಭಿವೃದ್ಧಿಯಾಗಿದೆ ಎಂದರು.
ಪ್ರತಿ ವರ್ಷ ಸುಮಾರು ಎರಡು ಲಕ್ಷ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಪದವೀಧರರು ಉತ್ತರ ಪ್ರದೇಶದಿಂದ ಹೊರಬರುತ್ತಿದ್ದಾರೆ. ರಾಜ್ಯದಲ್ಲಿ ಎರಡು ಐಐಟಿ, ಒಂದು ಐಐಎಂ ಹಾಗೂ ಅನೇಕ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಿದ್ದು, ಕೈಗಾರಿಕೆಗಳಿಗೆ ಅಗತ್ಯವಾದ ಕೌಶಲ್ಯಯುತ ಮಾನವ ಸಂಪನ್ಮೂಲ ಒದಗಿಸುತ್ತಿವೆ. ಕೃಷಿ ಕ್ಷೇತ್ರದಲ್ಲಿ ಉತ್ತರಪ್ರದೇಶವು ಮಹತ್ವದ ಸಾಧನೆ ಮಾಡುತ್ತಿದ್ದು, ರಾಜ್ಯದ 86 ಪ್ರತಿಶತ ಕೃಷಿ ಭೂಮಿ ನೀರಾವರಿ ಸೌಲಭ್ಯ ಹೊಂದಿದೆ. 96 ಲಕ್ಷ ಎಂಎಸ್ಎಂಇ ಘಟಕಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಒಂಬತ್ತು ವರ್ಷಗಳಲ್ಲಿ 18 ಸಾವಿರಕ್ಕೂ ಹೆಚ್ಚು ದೊಡ್ಡ ಕೈಗಾರಿಕಾ ಘಟಕಗಳು ಸ್ಥಾಪನೆಯಾಗಿವೆ. ಒಮ್ಮೆ 14 ಸಾವಿರದಷ್ಟಿದ್ದ ದೊಡ್ಡ ಕೈಗಾರಿಕೆಗಳ ಸಂಖ್ಯೆ ಈಗ 35 ಸಾವಿರಕ್ಕೂ ಹೆಚ್ಚಾಗಿದೆ ಎಂದರು.
ಇದೇ ವೇಳೆ ಉತ್ತರಪ್ರದೇಶ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಮಾತನಾಡಿ, ಉತ್ತರ ಪ್ರದೇಶವು ಕಳೆದ ಹತ್ತು ವರ್ಷಗಳಲ್ಲಿ ಕಾನೂನು ಸುವ್ಯವಸ್ಥೆ, ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ಮಹತ್ವದ ಪರಿವರ್ತನೆ ಕಂಡಿದ್ದು, ದೇಶದ ಅತ್ಯಂತ ಸುರಕ್ಷಿತ ಹಾಗೂ ಹೂಡಿಕೆ ಸ್ನೇಹಿ ರಾಜ್ಯವಾಗಿ ಹೊರಹೊಮ್ಮಿದೆ.
ರಾಜ್ಯದಲ್ಲಿ ಹೂಡಿಕೆದಾರರಿಗೆ ಅನುಕೂಲವಾಗುವಂತೆ ‘ನಿವೇಶ್ ಮಿತ್ರ’ ಮತ್ತು ‘ನಿವೇಶ್ ಸಾಥಿ’ ಸೇರಿದಂತೆ ಹಲವು ಡಿಜಿಟಲ್ ಪೋರ್ಟಲ್‌ಗಳನ್ನು ರೂಪಿಸಲಾಗಿದೆ. 2017ರಿಂದ 2026ರವರೆಗೆ ಕೈಗಾರಿಕೆಗಳಿಗೆ 17 ಸಾವಿರ ಕೋಟಿ ರೂ.ಗಳ ಅಧಿಕ ಪ್ರೋತ್ಸಾಹಧನ ವಿತರಿಸಲಾಗಿದೆ. ಎಸ್‌ಸಿ/ಎಸ್‌ಟಿ ಉದ್ಯಮಿಗಳಿಗೆ ವಿದ್ಯುತ್ ಶುಲ್ಕದಲ್ಲಿ 10 ವರ್ಷಗಳವರೆಗೆ ವಿನಾಯಿತಿ ಸೇರಿದಂತೆ ಹಲವು ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ವಿದೇಶಿ ನೇರ ಹೂಡಿಕೆ ನೀತಿಯಡಿ ಕೇಂದ್ರ ಸರಕಾರ ಸಹಯೋಗದೊಂದಿಗೆ ಶೇ. 75ರಷ್ಟು ಸಹಾಯಧನ ನೀಡುತ್ತಿದೆ. 2017ರಲ್ಲಿ ರಾಜ್ಯದ ಕ್ರೆಡಿಟ್-ಡಿಪಾಸಿಟ್ ಅನುಪಾತ ಶೇ.46 ಇದ್ದದ್ದು ಈಗ ಶೇ. 60 ಕ್ಕಿಂತ ಹೆಚ್ಚಾಗಿದೆ. ಬ್ಯಾಂಕಿಂಗ್ ವಹಿವಾಟು 12.4 ಲಕ್ಷ ಕೋಟಿ ರೂ.ಗಳಿಂದ 34 ಲಕ್ಷ ಕೋಟಿ ರೂ.ಗಳಿಗೆ ಅಧಿಕವಾಗಿದೆ. ರಫ್ತು ಮೌಲ್ಯ 86 ಸಾವಿರ ಕೋಟಿ ರೂ.ಗಳಿಂದ 2 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಳ ಕಂಡಿದೆ ಎಂದರು. .



