ಬೆಂಗಳೂರು: ಶುಚಿತ್ವ ಕಾಪಾಡುವುದು ಸೇರಿದಂತೆ ಲೋಷದೋಷ ಹೊಂದಿದ ಬೆಂಗಳೂರಿನ 6 ಪಿಜಿಗಳಿಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು ಬೀಗ ಜಡಿದಿದ್ದು, ಇತರೆ ಪಿಜಿಗಳಿಗೆ 1.98 ಲಕ್ಷ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೊಳನ್ ಆದೇಶದಂತೆ ಶುಕ್ರವಾರ ಉದ್ದಿಮೆಗಳನ್ನು ಆರೋಗ್ಯಾಧಿಕಾರಿಯಾದ ಡಾ.ಶಿವಕುಮಾರ್ ಅವರ ನೇತೃತ್ವದ ಅಧಿಕಾರಿಗಳ ತಂಡ 204 ಪೇಯಿಂಗ್ ಗೆಸ್ಟ್ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಚಿಕ್ಕಪೇಟೆ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ದಾಳಿಯ ವೇಳೆ ನಿಯಮ ಉಲ್ಲಂಘಿಸಿ ನಡೆಸುತ್ತಿದ್ದ ಶುಚಿತ್ವ ಕಾಪಾಡದ 6 ಪಿ.ಜಿ. ಗಳಿಗೆ ಬೀಗ ಜಡಿಯಲಾಗಿದ್ದು, ಲೋಪದೋಷ ಹೊಂದಿದ್ ಪಿಜಿಗಳಿಗೆ 1.96 ಲಕ್ಷ ರೂ. ದಂಡ ವಿಧಿಸಲಾಗಿದೆ.
ಶಿವಾಜಿನಗರ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಪೇಯಿಂಗ್ ಗೆಸ್ಟ್ ವಸತಿಗೃಹಗಳಲ್ಲಿ (PGs) ಶುದ್ಧ ಕುಡಿಯುವ ನೀರು, ಶುಚಿತ್ವ, ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಉತ್ತಮ ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನಗಳು ಹಾಗೂ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮತ್ತು FSSAI ನ ಆಹಾರ ಸುರಕ್ಷತಾ ಪ್ರಮಾಣ ಪತ್ರ ಇತ್ಯಾದಿ ಮೂಲಭೂತ ಸೌಕರ್ಯಗಳ ಬಗ್ಗೆ ತಪಾಸಣೆ ನಡೆಸಲಾಯಿತು.
ಎಲ್ಲಾ ಪಿ.ಜಿ ಯನ್ನು ನಡೆಸುತ್ತಿರುವವರಿಗೆ ತಿಳುವಳಿಕೆ ಪತ್ರಗಳನ್ನು ಜಾರಿ ಮಾಡಲಾಗಿದ್ದು, ಸದರಿ ಉದ್ದಿಮೆದಾರರು ಏಳು ದಿನಗಳ ಒಳಗಾಗಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು, ಕಾರ್ಯನಿರ್ವಹಣೆ ಮಾಡುವುದಕ್ಕೆ ಸೂಚಿಸಲಾಗಿರುತ್ತದೆ.
ತಪಾಸಣೆ ಕಾರ್ಯದಲ್ಲಿ ಕಂದಾಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಪೇಯಿಂಗ್ ಗೆಸ್ಟ್ ಕಟ್ಟಡದ ಆಸ್ತಿ ತೆರಿಗೆ ಮತ್ತು ಇತರೆ ತೆರಿಗೆಗಳ ವಿಷಯವಾಗಿ ಪರಿಶೀಲನೆ ನಡೆಸಿದರು. ಪರಿಶೀಲನೆಯ ವೇಳೆ ಆರೋಗ್ಯ ವೈದ್ಯಾಧಿಕಾರಿಗಳು, ಆರೋಗ್ಯ ಪರಿವೀಕ್ಷಕರು, ಕಂದಾಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



