ಮಧ್ಯಮ ಕ್ರಮಾಂಕದಲ್ಲಿ ವಿಹಾನ್ ಮಲ್ಹೋತ್ರಾ ಸಿಡಿಸಿದ ಶತಕದ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಪಂದ್ಯದಲ್ಲಿ 204 ರನ್ ಗಳಿಂದ ಜಿಂಬಾಬ್ವೆ ತಂಡವನ್ನು ಮಣಿಸಿದೆ.
ಬುಲಾವಾಯೊದಲ್ಲಿ ಮಂಗಳವಾರ ನಡೆದ ಸೂಪರ್ ಸಿಕ್ಸರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 358 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಜಿಂಬಾಬ್ವೆ ತಂಡ 37.4 ಓವರ್ ಗಳಲ್ಲಿ 148 ರನ್ ಗೆ ಆಲೌಟಾಯಿತು.
ಜಿಂಬಾಬ್ವೆ 34 ರನ್ ಕಲೆಹಾಕುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. 4ನೇ ವಿಕೆಟ್ ಗೆ ಕಿಯಾನ್ ಬ್ಲಿಂಗ್ ನೌಟ್ (37) ಮತ್ತು ಲೀರಾಯ್ ಚಿವ್ಲೋಲಾ 69 ರನ್ ಜೊತೆಯಾಟದಿಂದ ಹೋರಾಟ ನಡೆಸಿದರು. ಚಿವ್ಲೊಲಾ 77 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 62 ರನ್ ಗಳಿಸಿದರು.
ಟಟೆಂಡಾ ಚಿಮುಗುರು (29) ನಂತರ ಚಿವ್ಲೋಲಾಗೆ ಬೆಂಬಲ ನೀಡಿದರು. ನಂತರ ಬಂದ ಬ್ಯಾಟ್ಸ್ ಮನ್ ಗಳು ಬೇಗನೇ ನಿರ್ಗಮಿಸಿದರು. ಭಾರತದ ಪರ ಉದ್ದವ್ ಮೋಹನ್ ಮತ್ತು ಆಯುಷ್ ಮಾತ್ರೆ ತಲಾ 3 ವಿಕೆಟ್ ಪಡೆದು ಜಂಬಾಬ್ವೆಗೆ ಕಡಿವಾಣ ಹಾಕಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡದ ಪರ ವಿಹಾನ್ ಮಲ್ಹೋತ್ರಾ ಶತಕ ಬಾರಿಸಿ ತಂಡವನ್ನು ಮುನ್ನಡೆಸಿದರು. ವಿಹಾನ್ ಮಲ್ಹೋತ್ರಾ 107 ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ ಅಜೇಯ 109 ರನ್ ಬಾರಿಸಿದರು.
ಇದಕ್ಕೂ ಮುನ್ನ ವೈಭವ್ ಸೂರ್ಯವಂಶಿ 30 ಎಸೆತಗಳಲ್ಲಿ ತಲಾ 4 ಬೌಂಡರಿ ಮತ್ತು ಸಿಕ್ಸರ್ ಒಳಗೊಂಡ 52 ರನ್ ಗಳಿಸಿದರು. ನಂತರ ಅಭಿಗ್ಯಾನ್ ಕುಂದು 62 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 61 ರನ್ ಗಳಿಸಿದರು. ಖಿಲಾನ್ ಪಟೇಲ್ 12 ಎಸೆತಗಳಲ್ಲಿ 1 ಬೌಂಡರಿ ಮತ್ತು ೩ ಸಿಕ್ಸರ್ ಸಹಾಯದಿಂದ 30 ರನ್ ಸಿಡಿಸಿ ಗಮನ ಸೆಳೆದರು.



