ಸಂಘಟಿತ ಪ್ರದರ್ಶನ ನೀಡಿದ ಭಾರತ ತಂಡ 58 ರನ್ ಗಳ ಭಾರೀ ಅಂತರದಿಂದ ಪಾಕಿಸ್ತಾನ ತಂಡವನ್ನು ಸೋಲಿಸಿ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಬುಲೌಾಯೊದಲ್ಲಿ ನಡೆದ ಸೂಪರ್ ಸಿಕ್ಸರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 49.5 ಓವರ್ ಗಳಲ್ಲಿ 252 ರನ್ ಗೆ ಆಲೌಟಾಯಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಪಾಕಿಸ್ತಾನ ತಂಡ 46.2 ಓವರ್ ಗಳಲ್ಲಿ 194 ರನ್ ಗೆ ಪತನಗೊಂಡಿತು.
ಭಾರತ ಈ ಗೆಲುವಿನೊಂದಿಗೆ ಏಷ್ಯಾಕಪ್ ಟೂರ್ನಿಯಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿತು. ಹರಾರೆಯಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡವನ್ನು ಭಾರತ ಎದುರಿಸಲಿದೆ.
ಪಾಕಿಸ್ತಾನ ಒಂದು ಹಂತದಲ್ಲಿ ೧೫೧ ರನ್ ಗೆ ೨ ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಹಮ್ಜಾ ಜಹೂರ್ ಮತ್ತು ಉಸ್ಮಾನ್ ಖಾನ್ ಎರಡನೇ ವಿಕೆಟ್ ಗೆ 65 ರನ್ ಜೊತೆಯಾಟ ನಿಭಾಯಿಸಿದರು.
ಹಮ್ಜಾ 49 ಎಸೆತಗಳಲ್ಲಿ 8 ಬೌಂಡರಿ ಒಳಗೊಂಡ 42 ರನ್ ಗಳಿಸಿದರು. ಉಸ್ಮಾನ್ ಖಾನ್ 92 ಎಸೆತಗಳಲ್ಲಿ 7 ಬೌಂಡರಿ ಸಹಾಯದಿಂದ 66 ರನ್ ಗಳಿಸಿದರು. ನಾಯಕ ಫರ್ಹಾನ್ ಯೂಸೂಫ್ 38 ರನ್ ಗಳಿಸಿ ಉಸ್ಮಾನ್ ಜೊತೆ 3ನೇ ವಿಕೆಟ್ ಗೆ 63 ರನ್ ಪೇರಿಸಿದರು.
ಈ ಹಂತದಲ್ಲಿ ಆಯುಷ್ ಮಾತ್ರೆ ಮತ್ತು ಖಿಲಾನ್ ಪಟೇಲ್ ತಲಾ 3 ವಿಕೆಟ್ ಪಡೆದು ಪಾಕಿಸ್ತಾನದ ಬ್ಯಾಟಿಂಗ್ ಬೆನ್ನೆಲುಬು ಮುರಿದು ಭಾರತಕ್ಕೆ ಜಯ ತಂದುಕೊಟ್ಟರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ 47 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಆದರೆ ಈ ಹಂತದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ವೇದಾಂತ್ ತ್ರಿವೇದಿ 98 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 68 ರನ್ ಸಿಡಿಸಿದರು. ವಿಹಾನ್ ಮಲ್ಹೋತ್ರಾ (21), ಅಭಿಗ್ಯಾನ್ ಕುಂದ್ (16), ಅಂಬರೀಷ್ (29) ಮತ್ತು ಕಾನಿಷ್ಕ್ ಚೌಹಾಣ್ (35) ತಂಡವನ್ನು ರಕ್ಷಿಸಿದರು.



