ಚಂಡೀಗಢ: ಆಮ್ ಆದ್ಮಿ ಪಕ್ಷದ ಮುಖಂಡ ಲಕ್ಕಿ ಒಬೆರಾಯ್ ಅವರನ್ನು ಕಾರಿನೊಳಗೆ 5 ಬಾರಿ ಗುಂಡಿಕ್ಕಿ ದುಷ್ಕರ್ಮಿಗಳು ಹಾಡುಹಗಲೇ ಕೊಲೆ ಮಾಡಿದ ಭೀಕರ ಘಟನೆ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದಿದೆ.
ಮಾಡೆಲ್ ಟೌನ್ ಬಳಿಯ ಗುರುದ್ವಾರದ ಹೊರಗೆ ಒಬೆರಾಯ್ ತಮ್ಮ ಕಾರನ್ನು ನಿಲ್ಲಿಸುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ದಾಳಿಕೋರರು 5 ಬಾರಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತೀವ್ರ ರಕ್ರಸ್ತಾವದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ಕೂಡಲೇ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.
ಲಕ್ಕಿ ಒಬೆರಾಯ್ ಅವರ ಪತ್ನಿ ಈ ಹಿಂದೆ ಎಎಪಿ ಅಭ್ಯರ್ಥಿಯಾಗಿ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅವರು ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಆಡಳಿತದಲ್ಲಿ ಪಂಜಾಬ್‌ನ ಕಾನೂನು ಸುವ್ಯವಸ್ಥೆ ಕುಸಿದಿದೆ” ಎಂದು ಅವರು ಸಿಟ್ಟು ಹೊರಹಾಕಿದರು.
ಜಲಂಧರ್‌ನ ಗುರುದ್ವಾರದ ಹೊರಗೆ ನಾಯಕ ಲಕ್ಕಿ ಒಬೆರಾಯ್ ಅವರನ್ನು ಹಗಲಿನಲ್ಲೇ ಹತ್ಯೆ ಮಾಡಿರುವುದು ರಾಜ್ಯದ ಕಾನೂನು ಪರಿಸ್ಥಿತಿಯ ವಾಸ್ತವವನ್ನು ಬಹಿರಂಗಪಡಿಸುತ್ತದೆ. ಆಡಳಿತ ಪಕ್ಷದ ನಾಯಕರು ಸಹ ಸುರಕ್ಷಿತವಾಗಿಲ್ಲದಿದ್ದರೆ ಸಾಮಾನ್ಯ ನಾಗರಿಕರಿಗೆ ಇನ್ನೇನು ಭರವಸೆ ಉಳಿದಿದೆ ಎಂದು ಪ್ರಶ್ನಿಸಿದ್ದಾರೆ.



