ಪ್ರವಾಸಕ್ಕೆ ತೆರಳಲು ಗಂಡ ಅನುಮತಿ ನೀಡಲಿಲ್ಲ ಎಂದು ಬೇಸರಗೊಂಡ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಸರಸ್ವತಿಪುರಂನ ನಿವಾಸಿ 46 ವರ್ಷದ ಸಂಧ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದು, ಗೃಹಿಣಿ ಸಂಬಂಧಿಕರು ಇದು ಕೊಲೆ ಎಂದು ಆರೋಪಿಸಿದ್ದಾರೆ.
ಮನೆಯ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ಮೂಲದ ಸಂಧ್ಯಾ 25 ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ರಂಗನಾಥ್ ಎಂಬವರನ್ನು ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಪುತ್ರಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಂಧ್ಯಾ ಮನೆಯಲ್ಲಿ ಗಂಡ ಹಾಗೂ ಮಗನ ಜೊತೆ ವಾಸವಿದ್ದರು.
ನಿನ್ನೆ ರಾತ್ರಿ ಪ್ರವಾಸದ ವಿಚಾರದಲ್ಲಿ ಗಂಡ-ಹೆಂಡತಿ ನಡುವೆ ಜಗಳವಾಗಿದೆ. ಗಂಡ ಮನೆಯಿಂದ ಹೊರ ಹೋದ ನಂತರ ಫ್ಯಾನ್ಗೆ ನೇಣು ಹಾಕಿಕೊಂಡಿದ್ದಾರೆ.
ಅಕ್ಕನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿರುವ ಸಹೋದರ ಗುರುಮೂರ್ತಿ, ಗಂಡ ಹಾಗೂ ಮಗನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
