ಬೆಂಗಳೂರು: ಒಳಮೀಸಲಾತಿ ಇಲ್ಲದೆ ನೇಮಕಾತಿ ಆದೇಶವನ್ನು ತಕ್ಷಣವೇ ಹಿಂಪಡೆಯಲು ಒತ್ತಾಯಿಸಿರುವ ರಾಜ್ಯ ಮಾದಿಗರ ಸಂಘಟನೆಗಳ ಒಕ್ಕೂಟವು ಗುರುವಾರ ಸಚಿವರು, ಶಾಸಕರಿಗೆ ಮುತ್ತಿಗೆ ಹಾಗೂ ಮಾ.12ರಂದು ಬೃಹತ್ ಹೋರಾಟ ಕೈಗೊಳ್ಳಲು ತೀರ್ಮಾನಿಸಿದೆ.
ಒಳಮೀಸಲಾತಿ ಇಲ್ಲದೆ ನೇಮಕಾತಿ ಆದೇಶದ ಸಂಬಂಧ ರಾಜ್ಯ ಮಾದಿಗರ ಸಂಘಟನೆಗಳ ಒಕ್ಕೂಟ ಸಭೆ ನಡೆಸಿ ಸುಧೀರ್ಘ ಚರ್ಚೆ ನಡೆಸಿ ಆದೇಶವನ್ನು ತೀವ್ರವಾಗಿ ಖಂಡಿಸಿ ರಾಜ್ಯ ಸರ್ಕಾರಕ್ಕೆ 12 ಅಂಶಗಳ ಹಕ್ಕೊತ್ತಾಯ ಮಾಡಿದೆ. ಸಭೆಯಲ್ಲಿ ಬಲಗೈ ಸಮಾಜದ ಪ್ರತಿನಿಧಿಯಂತೆ ವರ್ತಿಸಿ ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿ ನಡೆಯನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್. ಸಿ ಮಹಾದೇವಪ್ಪ ಅನುಸರಿಸಿದ್ದು, ಅವರ ರಾಜೀನಾಮೆಯನ್ನು ಪಡೆಯಲು ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಗೂ ಡಿಪಿಎಆರ್ ಇಲಾಖೆಯ ಐಎಎಸ್/ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಸಾಮಾಜಿಕ ನ್ಯಾಯದ ಪರಿಶಿಷ್ಟ ಜಾತಿ ಒಳ ಮೀಸಲಾತಿಯಂತೆ ಹುದ್ದೆಗಳನ್ನು ಭರ್ತಿ ಮಾಡಲೆಂದೇ 28.10.2024ರಿಂದ ತಡೆ ಹಿಡಿಯಲಾದ ಹುದ್ದೆಗಳಿಗೆ ಒಳ ಮೀಸಲಾತಿ ತಪ್ಪಿಸಿ, ಬಾಯಿಗೆ ಬಂದ ಅನ್ನದ ತುತ್ತನ್ನು ಕಸಿದು, 17% ಅಥವಾ 15% ದಲ್ಲಿ ಒಳಮೀಸಲಾತಿ ಬೇಡಿಕೆ ಪರಿಗಣಿಸದೆ ತೀವ್ರ ವಿರೋಧದ ನಡುವೆ ಒಳ ಮೀಸಲಾತಿ ತಪ್ಪಿಸಿ, ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು 27.02.2026 ರಂದು ಹೊರಡಿಸಿರುವ ಆದೇಶ ಕೂಡಲೇ ಹಿಂಪಡೆಯಲು ಆಗ್ರಹಿಸಲಾಗಿದೆ.
ಕೂಡಲೇ ವಿಶೇಷ ಕ್ಯಾಬಿನೆಟ್ ಕರೆದು ಒಳ ಮೀಸಲಾತಿಯ 17% ಅಥವಾ 15%ರಲ್ಲಿ ಒಳಮೀಸಲಾತಿ ಕೋರುತ್ತಿರುವ ಮಾದಿಗ ಸಂಬಂಧಿತ ಜಾತಿಗೆ 15%, ಪ. ಜಾ ಮೀಸಲಾತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿಂದುಳಿದಿರುವುವಿಕೆ ಆಧಾರದ ಮೇಲೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಅಥವಾ ತಮ್ಮದೇ ಸರ್ಕಾರ ನೇಮಿಸಿ ಅಂಗೀಕರಿಸಿರುವ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗದ ಶಿಫಾರಸ್ಸಿನ ಪ್ರಮಾಣದಂತೆ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ 6% ( ಗುಂಪು-ಎ) ಮತ್ತು ಅಲೆಮಾರಿ ಸಮುದಾಯಕ್ಕೆ 1% (ಗುಂಪು-ಬಿ) ಮತ್ತು ಬಲಗೈ ಸಮುದಾಯ ಹಾಗೂ ಕೊರಮ, ಕೊರಚ, ಲಂಬಾಣಿ, ಭೋವಿ ಸೇರಿ ಒಂದು ಗುಂಪು (ಗುಂಪು-ಸಿ) ಎಂದು ಮರು ವರ್ಗಿಕರಿಸಿ ಕೂಡಲೇ ಪರಿಷ್ಕೃತ ಒಳ ಮೀಸಲಾತಿ ಕಲ್ಪಿಸಿ ಆದೇಶಿಸಿ 27.02.2026ರಂದು ಹೊರಡಿಸಿರುವ ಡಿಪಿಎಆರ್ ಆದೇಶವನ್ನು ಕೂಡಲೇ ಹಿಂಪಡೆದು ಪರಿಷ್ಕೃತ ರೋಸ್ಟರ್ ಬಿಂದುಗಳನ್ನು ಗುರುತಿಸಿ, ಆದೇಶಿಸಿ 56,342 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಆಗ್ರಹಿಸಲಾಗಿದೆ.
ಮಾ.6ಕ್ಕೆ ಘೆರಾವ್.12ಕ್ಕೆ ಹೋರಾಟ:
ಪ್ರಸಕ್ತ ನೇಮಕಾತಿ ಆದೇಶ ಕೂಡಲೇ ಹಿಂಪಡೆದು ಒಳ ಮೀಸಲಾತಿ ಆದೇಶಿಸದಿದ್ದರೆ ರಾಜ್ಯಾದ್ಯಂತ ಏಕ ಕಾಲದಲ್ಲಿ ಮಾ.6ರಂದು ಬೃಹತ್ ಪ್ರತಿಭಟನೆ ಮಾಡಲು ನಿರ್ಣಯ ಮಾಡಲಾಗಿದೆ. ಅಂದು ಆಡಳಿತರೂಢ ಶಾಸಕರು, ಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ. ಮಾ.11ರಂದು ಬೆಂಗಳೂರು ಚಲೋ ಬೃಹತ್ ಪ್ರತಿಭಟನೆ ಮಾಡಲು ನಿರ್ಣಯಿಸಲಾಗಿದೆ. ಅದೇ ರೀತಿ ಮಾ.12ರಂದು ಬೆಂಗಳೂರಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.
ಒಳ ಮೀಸಲಾತಿ ಅನುಷ್ಠಾನ:
ಸಾಮಾಜಿಕ ನ್ಯಾಯದ ನೀತಿಯನ್ನು ನ್ಯಾಯಾಂಗೀಯ ಸವಾಲುಗಳಿಂದ ರಕ್ಷಿಸಲು 56% ಮೀಸಲಾತಿ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ, ಸರ್ವ ಪಕ್ಷಗಳ ನಿಯೋಗದೊಂದಿಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿಗೆ ಮೀಸಲಿರುವ ಎಲ್ಲಾ ಕ್ಷೇತ್ರಗಳಲ್ಲಿ ಒಳ ಮೀಸಲಾತಿ ಅನುಷ್ಠಾನವಾಗಬೇಕು ಎಂದು ಹಕ್ಕೊತ್ತಾಯ ಮಾಡಲಾಗಿದೆ.
ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಠ ಜಾತಿಯ ಮಕ್ಕಳಿಗೆ ವರ್ಗಿಕರಣದ ಅನುಪಾತದಲ್ಲಿ ಒಳ ಮೀಸಲಾತಿ ಸೌಲಭ್ಯ ನೀಡಬೇಕು. ಎಲ್ಲಾ ಬಗೆಯ ನೇಮಕಾತಿಗಳನ್ನು ಆದಷ್ಟು ಬೇಗನೇ ಮಾಡಲು ಮತ್ತು ಮುಂಬಡ್ತಿಗೂ ಒಳ ಮೀಸಲಾತಿ ಕಲ್ಪಿಸಿ, ರೋಸ್ಟರ್ ನಿಗದಿಪಡಿಸಿ, ಸರ್ಕಾರದ ಆದೇಶ ಹೊರಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ದಲಿತರಿಗೆ ಅನ್ಯಾಯ:
2001ರಿಂದ ಭರ್ತಿ ಆಗದೆ ಉಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಗಾಗಿ ವಿಶೇಷ ನಿಯಮ ಇಲ್ಲದ ಕಾರಣ, ಪಶು ವೈದ್ಯಾಧಿಕಾರಿ ಇತ್ಯಾದಿ ಹುದ್ದೆಗಳಲ್ಲಿ ದಲಿತರಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ನೀಡುವುದರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗೆ ವಿಶೇಷ ನಿಯಮವನ್ನು ರಚಿಸಿ, ಕೂಡಲೇ ಆದೇಶಿಸಬೇಕು ಎಂದು ಒಕ್ಕೂಟ ಹಕ್ಕೊತ್ತಾಯ ಮಾಡಿದೆ.
ಚುನಾವಣೆಯಲ್ಲಿ ತಕ್ಕಪಾಠ:
ಬೇಡಿಕೆ ಈಡೇರಿಸದೇ ಇದ್ದಲ್ಲಿ ಮಾದಿಗ ಸಮುದಾಯ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದೆ ಎಂದು ಸಮುದಾಯದ ನಾಯಕರು ಎಚ್ಚರಿಕೆ ನೀಡಿದರು. ಒಳಮೀಸಲಾತಿ ವರ್ಗೀಕರಣ ಮಾಡದೇ ಹೋದರೆ ಹೋರಾಟ ಯಾವ ರೂಪ ತಾಳುತ್ತೆ ಅನ್ನೋದು ಗೊತ್ತಿಲ್ಲ. ಅದಕ್ಕೆ ಸರ್ಕಾರ ಹೊಣೆಯಾಗಲಿದೆ. ಮಾದಿಗ ಹೋರಾಟವೇ ಕಾಂಗ್ರೆಸ್ ಪಕ್ಷದ ಸಾವು. ವೋಟ್ ಬ್ಯಾಂಕ್ಗಾಗಿ ಮಾದಿಗರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಮಾದಿಗರಿಂದ ಗೆದ್ದ ಶಾಸಕರು ಏನು ಮಾಡುತ್ತಿದ್ದಾರೆ. ಸಚಿವ ಹೆಚ್. ಸಿ. ಮಹದೇವಪ್ಪ ಸಮಾಜಕಲ್ಯಾಣ ಇಲಾಖೆಯನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಿದ್ದಾರೆ. ಅವರು ರಾಜೀನಾಮೆ ಕೊಡಬೇಕು. ಸಿಎಂ ಸಿದ್ದರಾಮಯ್ಯ ಕೂಡ ಕೆಳಗಿಳಿಯಬೇಕು ಎಂದು ಒಕ್ಕೂಟದ ಪದಾಧಿಕಾರಿ ಕೇಶವಮೂರ್ತಿ ಆಗ್ರಹಿಸಿದ್ದಾರೆ.



