ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಕಾರಣ ಕಾರಿನಲ್ಲಿದ್ದ ಮೂವರು ಸಬ್ ಇನ್ ಸ್ಪೆಕ್ಟರ್ ಗಳು ಮೃತಪಟ್ಟು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಚಿತ್ರದುರ್ಗದಲ್ಲಿ ಸಂಭವಿಸಿದೆ.
ಚಿತ್ರದುರ್ಗದ ಹೆಗ್ಗೆರೆ ಬಳಿ ಭಾನುವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಪೊಲೀಸ್ ರಿಸರ್ವ್ ಸಬ್ ಇನ್ಸ್ಪೆಕ್ಟರ್ (ಆರ್ಎಸ್ಐ) ಆದ ಮಂಜುನಾಥ್, ಅಂಬರೀಷ್ ಹಾಗೂ ಸಚಿನ್ ಮೃತಪಟ್ಟಿದ್ದಾರೆ.
ಪೊಲೀಸ್ ಅಧಿಕಾರಿಗಳು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದರು. ಬಳ್ಳಾರಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಗಂಭೀರ ಗಾಯಗೊಂಡಿರುವ ಪಿಎಸ್ಐ ಈಶ್ವರ್ ಹಾಗೂ ಆರ್ಎಸ್ಐ ಮಹಾಂತೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಬಂಡಾರು, ಐಮಂಗಲ ಠಾಣೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಐವರು ಪೊಲೀಸ್ ಅಧಿಕಾರಿಗಳು ಮದುವೆ ಕಾರ್ಯಕ್ರಮಕ್ಕೆ ಕಾರಿನಲ್ಲಿ ಒಟ್ಟಿಗೆ ತೆರಳುತ್ತಿದ್ದು, ಬೆಂಗಳೂರಿಂದ ಬಳ್ಳಾರಿಗೆ ತೆರಳುವ ವೇಳೆ ಅಪಘಾತವಾಗಿದೆ. ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಸ್ಪಿ ರಂಜಿತ್ ಬಂಡಾರು ಮಾಹಿತಿ ನೀಡಿದ್ದಾರೆ.



