Tuesday, June 30, 2026
Google search engine
Homeರಾಜ್ಯಸಭಾತ್ಯಾಗ ಮಾಡಿದ ಸ್ಪೀಕರ್‌ ಯುಟಿ ಖಾದರ್: ಪ್ರಮುಖ ಅಧಿಕಾರಿಗಳ ತಲೆದಂಡ

ಸಭಾತ್ಯಾಗ ಮಾಡಿದ ಸ್ಪೀಕರ್‌ ಯುಟಿ ಖಾದರ್: ಪ್ರಮುಖ ಅಧಿಕಾರಿಗಳ ತಲೆದಂಡ

ವಿಧಾನಸಭೆ ಅಧಿವೇಶನದಲ್ಲಿ ಸಮರ್ಪಕ ಉತ್ತರ ನೀಡದ ಬೇಜವಾಬ್ದಾರಿಯಿಂದ ಅಸಮಾಧಾನಗೊಂಡ ಸ್ಪೀಕರ್‌ ಯುಟಿ ಖಾದರ್‌ ಸ್ವತಃ ಸಭಾತ್ಯಾಗ ಮಾಡಿ ಕಲಾಪ ಮುಂದೂಡಿದ ವಿಚಿತ್ರ ಘಟನೆ ನಡೆದಿದೆ. ಇದರಿಂದ ವಿಚಲಿತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಅಮಾನತಿಗೆ ಸೂಚಿಸಿದ್ದಾರೆ.

ವಿಧಾನಸಭೆ ಅಧಿವೇಶನದಲ್ಲಿ ಶಾಸಕರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಇಲಾಖೆಯ ಅಧಿಕಾರಿಗಳ ವಿರುದ್ಧ ಸ್ಪೀಕರ್‌ ಯುಟಿ ಖಾದರ್‌ ಅಸಮಾಧಾನ ವ್ಯಕ್ತಪಡಿಸಿದರು. ಪದೇಪದೇ ಸೂಚನೆ ನೀಡಿದ ಹೊರತಾಗಿಯೂ ೨೪೫೦ ಪ್ರಶ್ನೆಗಳ ಪೈಕಿ ಕೇವಲ ೯೦ ಪ್ರಶ್ನೆಗಳಿಗೆ ಮಾತ್ರ ಉತ್ತರ ಬಂದಿರುವುದಕ್ಕೆ ಸೋಮವಾರ ದಿಢೀರನೆ ಉತ್ತರ ಕೊಡುವವರೆಗೂ ಸನ ನಡೆಸುವುದಿಲ್ಲ ಎಂದು ಹೇಳಿ ಸಮಯವನ್ನು ನಿಗದಿಪಡಿಸದೇ ಕಲಾಪ ಮುಂದೂಡಿ ಹೊರನಡೆದರು.

ಸದನದಲ್ಲಿ ಸಚಿವ ಪರಮೇಶ್ವರ್ ಉತ್ತರಗಳನ್ನು ಮಂಡಿಸುತ್ತಿದ್ದ ವೇಳೆ ವಿಪಕ್ಷಗಳ ಸದಸ್ಯರಿಂದ ಟೀಕೆ ವ್ಯಕ್ತವಾಗಿದೆ. ಕಲಾಪ ಆರಂಭದಿಂದಲೂ ಸಚಿವರಿಂದ ನಿರೀಕ್ಷಿತ ಉತ್ತರ ಬಂದಿಲ್ಲ. ಸರ್ಕಾರ ಸತ್ತು ಹೋಗಿದೆ, ತಿಥಿ‌ ಮಾಡಬೇಕು, ತಿಥಿ ಊಟಕ್ಕೆ ಹೋಗಬೇಕು ಅಂತಾ ವಿಪಕ್ಷ ನಾಯಕ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಸಚಿವರ ವಿರುದ್ಧ ಸ್ಪೀಕರ್ ಖಾದರ್​ ಅಸಮಾಧಾನ ಹೊರಹಾಕಿದ್ದಾರೆ. ಸದನದಲ್ಲಿ ಎಲ್ಲಾ ಶಾಸಕರೂ ಪ್ರಶ್ನೆ ಕೇಳುತ್ತಾರೆ. ಎಲ್ಲವೂ ಚುಕ್ಕೆ ಗುರುತಿನ ಪ್ರಶ್ನೆ ಆಗಲ್ಲ. ಗಮನ ಸೆಳೆಯುವ ಸೂಚನೆಗೂ ಸಚಿವರು ಉತ್ತರ ಕೊಡಲ್ಲ. 3 ಸಲ ಸಚಿವರಿಗೆ ಹೇಳಿದರೂ ಸುಧಾರಣೆ ಕಂಡು ಬರುತ್ತಿಲ್ಲ. ಸಂಬಂಧಿಸಿದ ಸಚಿವರು ಬಂದು ಸ್ಪಷ್ಟತೆ, ಕಾರಣ ಕೊಡಬೇಕು. ಅಲ್ಲಿಯವರೆಗೂ ನಾನು ಸದನ ನಡೆಸುವುದಿಲ್ಲ ಎಂದು ಖಾರವಾಗಿ ಹೇಳುವ ಮೂಲಕ ಆಡಳಿತ ಪಕ್ಷಕ್ಕೆ ಸ್ಪೀಕರ್​​ ಖಾದರ್​​ ಬಿಸಿ ಮುಟ್ಟಿಸಿದ್ದಾರೆ.

ವಿಪಕ್ಷ ನಾಯಕ ಆರ್​​. ಅಶೋಕ್​​ ಮಾತನಾಡಿ ವಿಧಾನಸಭೆ ಅಧಿವೇಶನದಲ್ಲಿ ಸ್ಪೀಕರ್ ಸಭಾತ್ಯಾಗ ಮಾಡಿದ್ದಾರೆ. ಪ್ರತಿದಿನವೂ ಶೇ. 10-30 ಲಿಖಿತ ಪ್ರಶ್ನೆಗಳಿಗೆ ಮಾತ್ರ ಉತ್ತರ ಕೊಡುತ್ತಿದ್ದಾರೆ. ಸರ್ಕಾರ ಹೆಣದಂತಾಗಿದ್ದು, ಸಿಎಂ ಹಿಡಿತ ಕಳೆದುಕೊಂಡಿದ್ದಾರೆ. ಸಚಿವರು ಸದನಕ್ಕೆ ಬರುತ್ತಿಲ್ಲ. ಯಾರು ಸಿಎಂ ಅಂತ ತೀರ್ಮಾನ ಆಗದಿರುವ ಕಾರಣ ಈ ರೀತಿ ಆಗುತ್ತಿದೆ.

ಸ್ಪೀಕರ್ ನೊಂದು ಹೊರ ಹೋಗಿರುವುದು ಸರ್ಕಾರಕ್ಕೆ ಚಾಟಿ ಏಟು ನೀಡಿದಂತಾಗಿದೆ. ಸ್ಪೀಕರ್ ನಡೆಯನ್ನು ಸ್ವಾಗತಿಸುತ್ತೇವೆ. ಸರ್ಕಾರ ಬದುಕಿದ್ದರೆ ಸಿಎಂ ಬಂದು ಕ್ಷಮೆ ಕೇಳಬೇಕು. ಮಾನ, ಮಾರ್ಯಾದೆ ಇದ್ದರೆ ಸಚಿವರು ರಾಜೀನಾಮೆ ಕೊಟ್ಟು ಹೋಗಬೇಕು ಎಂದು ತಿವಿದಿದ್ದಾರೆ.

ಶಾಸಕ ಸುನಿಲ್‌ ಕುಮಾರ್‌ ಮಾತನಾಡಿ, ವಿಧಾನಸಭೆ ಇತಿಹಾಸದಲ್ಲಿಯೇ ಸರ್ಕಾರದ ಧೋರಣೆ ಖಂಡಿಸಿ ಸ್ಪೀಕರ್ ಪೀಠ ಬಿಟ್ಟು ಹೊರ ಹೋಗಿದ್ದಾರೆ. ಇದು ಆಘಾತಕಾರಿಯಾಗಿದ್ದು, ಸಿಎಂ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು. 40 ದಿನದ ಅಧಿವೇಶನದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರವೇ ಬರುವುದಿಲ್ಲ. ಸ್ಪೀಕರ್ ತೆಗೆದುಕೊಂಡಿರುವ ನಿರ್ಣಯಕ್ಕೆ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಕೂಡಲೇ ಎಚ್ಚೆತ್ತುಕೊಂಡ ಸಿಎಂ ಸಿದ್ದರಾಮಯ್ಯ ಸ್ಪೀಕರ್‌ ಅವರ ಚೇಂಬರ್‌ ಗೆ ಹೋಗಿ ಸಮಾಧಾನಪಡಿಸಿದರು. ಅಲ್ಲದೇ ಸದನಕ್ಕೆ ಉತ್ತರ ಕೊಡದ ಕಂದಾಯ, ಐಟಿ-ಬಿಟಿ ಹಾಗೂ ಸಾರಿಗೆ ಇಲಾಖೆ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments