ಮಂಡ್ಯ: ನಾವು ಇದುವರೆಗೆ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿಲ್ಲ. ಸದ್ಯ ತಮಿಳುನಾಡಿಗೆ ಬಿಡಲು ನಮ್ಮ ಬಳಿ ನೀರು ಕೂಡ ಇಲ್ಲ. ಕುಡಿಯುವ ನೀರಿಗಾಗಿ ನಮ್ಮ ಮೊದಲ ಆದ್ಯತೆ ಇದೆ ಎಂದು ಸಚಿವ ರಾಮಲಿಂಗ ರೆಡ್ಡಿ ಎಂದು ತಿಳಿಸಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಕ್ಯಾತೆ ತೆಗೆಯುತ್ತಿರುವ ವಿಚಾರಕ್ಕೆ ಸಂಬಂಧ ಮಂಡ್ಯದ ಮುತ್ತತ್ತಿಯಲ್ಲಿ ಸಚಿವ ರಾಮಲಿಂಗ ರೆಡ್ಡಿ ಅವರು ಮಾತನಾಡಿದರು.
ನಾಳೆ ನಡೆಯಲಿರುವ ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಲಾಗುವುದು ಎಂದು ತಿಳಿಸಿದರು.
ಮೋಡ ಬಿತ್ತನೆಗೆ ತೀರ್ಮಾನ: ರಾಮಲಿಂಗರೆಡ್ಡಿ
ಮಂಡ್ಯ: ಮಳೆ ಕೊರತೆಯ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ನಿನ್ನೆ ಪ್ರಸ್ತಾವನೆ ಬಂದಿದ್ದು, ಅದರ ಬಗ್ಗೆ ಮುಂದೆ ತೀರ್ಮಾನ ಮಾಡಲಾಗುವುದು ಎಂದು ರಾಮಲಿಂಗರೆಡ್ಡಿ ಹೇಳಿದರು.
ಮಳೆ ಕೊರತೆ ಹಿನ್ನೆಲೆಯಲ್ಲಿ ಮೋಡ ಭಿತ್ತನೆ ಕುರಿತು ಪ್ರತಿಕ್ರಯಿಸಿ, ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗುವುದು ಎಂದರು.
ಋಷಿಕೇಶ, ಹರಿದ್ವಾರ ಮಾದರಿಯಲ್ಲಿ ಮುತ್ತತ್ತಿ ಅಭಿವೃದ್ಧಿ : ಸಚಿವ ರಾಮಲಿಂಗರೆಡ್ಡಿ
ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ಮುತ್ತತ್ತಿಯಲ್ಲಿ ಪದೇ ಪದೇ ಸಂಭವಿಸುತ್ತಿರುವ ಪ್ರವಾಸಿಗರ ಮುಳುಗಡೆ ಮತ್ತು ಸಾವು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಜಲಸಂಪನ್ಮೂಲ ಸಚಿವ ರಾಮಲಿಂಗರೆಡ್ಡಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನಾ ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಭವಿಷ್ಯದಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಪ್ರವಾಸಿಗರ ಸುರಕ್ಷತೆಯನ್ನು ಖಾತ್ರಿಪಡಿಸಲು ಸ್ಥಳೀಯ ಶಾಸಕ ಪಿಎಂ. ನರೇಂದ್ರ ಸ್ವಾಮಿ ಸಲಹೆಯಂತೆ ಸಚಿವರು ಹಲವು ಮಹತ್ವದ ನಿರ್ಧಾರಗಳನ್ನು ಹೇಳಿದರು.
ಪ್ರವಾಸಿಗರು ಮತ್ತು ಭಕ್ತರು ನದಿಯಲ್ಲಿ ಸುರಕ್ಷಿತವಾಗಿ ಸ್ನಾನ ಮಾಡಲು ಋಷಿಕೇಶ ಹಾಗೂ ಹರಿದ್ವಾರದ ಮಾದರಿಯಲ್ಲಿ ವ್ಯವಸ್ಥಿತ ಕಾಲುವೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಶೀಘ್ರವೇ ಡಿಪಿಆರ್ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಗ ಭಕ್ತರು ಅಲ್ಲಿಯೇ ಸ್ನಾನ ಮಾಡುವದು ನದಿಗೆ ಇಳಿಯುವ ಅವಶ್ಯಕತೆ ಇರುವುದಿಲ್ಲ.
ನದಿ ತೀರ ಹಾಗೂ ಸೂಕ್ತ ಸ್ಥಳಗಳಲ್ಲಿ 20 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಜೊತೆಗೆ 8 ಜನ ಮಾರ್ಷಲ್‌ಗಳನ್ನು ಹಾಗೂ ಪೊಲೀಸ್ ಚೌಕಿಯನ್ನು ನಿರ್ಮಿಸಲಾಗುವುದು. ರಜಾ ದಿನಗಳಲ್ಲಿ ವಿಶೇಷ ಪೊಲೀಸ್ ಭದ್ರತೆಗಾಗಿ ಎಸ್‌ಪಿಗೆ ಸೂಚನೆ ನೀಡಲಾಗಿದೆ.
ಪ್ರವಾಸಿ ತಾಣದಲ್ಲಿ ಶೌಚಾಲಯಗಳ ನಿರ್ಮಾಣ ಹಾಗೂ ಎಚ್ಚರಿಕೆ ನೀಡುವ ಸೂಚನಾ ಫಲಕಗಳನ್ನು ಸರಿಯಾಗಿ ಅಳವಡಿಸಲು ನಿರ್ದೇಶನ ನೀಡಲಾಗಿದೆ. ನದಿ ತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹಾಕದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ ಈ ಪ್ರದೇಶ ಮುಳುಗಡೆಯಾಗಲಿದೆ. ಆದರೆ, ಅದಕ್ಕೆ ಇನ್ನೂ ಹೆಚ್ಚಿನ ಸಮಯ ಬೇಕಾಗಿರುವುದರಿಂದ, ಅಷ್ಟರವರೆಗೆ ಪ್ರವಾಸಿಗರ ಸುರಕ್ಷತೆಗಾಗಿ ಈ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.



