ಬೆಂಗಳೂರು: ಹಸೆಮಣೆ ಏರಿ ಹೊಸ ಜೀವನ ಆರಂಭಿಸಬೇಕಿದ್ದ ಯುವತಿಯೊಬ್ಬಳು ತನ್ನ ಭಾವಿ ಪತಿಯ ಕೈಯಲ್ಲೇ ಕ್ರೂರವಾಗಿ ಕೊಲೆಯಾಗಿರುವ ಘಟನೆ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜೋಯಾ (19) ಎಂಬಾಕೆಯನ್ನು ಇತ್ತೀಚೆಗಷ್ಟೇ ನಿಶ್ಚಿತಾರ್ಥವಾಗಿ ಮದುವೆ ಆಗಬೇಕಿದ್ದ ಶಬೀಲ್ (20) ಎಂಬ ಯುವಕನೇ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಇಬ್ಬರೂ ಶೀಘ್ರ ಮದುವೆಯಾಗಬೇಕಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಇಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಶಬೀಲ್, ಜೋಯಾಳನ್ನು ಡಿಜೆ ಹಳ್ಳಿಯ ಸಕ್ಕರೆ ಮಂಡಿ ಏರಿಯಾದಲ್ಲಿರುವ ತನ್ನ ಕುಟುಂಬಕ್ಕೆ ಸೇರಿದ ಪಾಳು ಬಿದ್ದ ಮನೆಗೆ ಕರೆತಂದಿದ್ದಾನೆ. ಅಲ್ಲಿ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಜಗಳ ನಡೆದಿದ್ದು, ಈ ವೇಳೆ ಆಕ್ರೋಶಗೊಂಡ ಶಬೀಲ್, ತನ್ನ ಬಳಿಯಿದ್ದ ಆಯುಧದಿಂದ ಜೋಯಾಳ ಕತ್ತನ್ನು ಸೀಳಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಬೆಳಿಗ್ಗೆ 6:30ರ ಸುಮಾರಿಗೆ ಆರೋಪಿ ಶಬೀಲ್ ಕುಟುಂಬಸ್ಥರು ಆ ಪಾಳು ಬಿದ್ದ ಮನೆಗೆ ಬಂದಾಗ ಯುವತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಡಿಜೆ ಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ.
ಪ್ರಾಥಮಿಕ ಮಾಹಿತಿಯನ್ವಯ, ಹತ್ಯೆಯಾಗಿರುವ ಅಪ್ರಾಪ್ತೆ ಹಾಗೂ ಶಂಕಿತ ಆರೋಪಿಗೆ ಮದುವೆ ನಿಶ್ಚಿತಾರ್ಥವಾಗಿತ್ತು. ಬಕ್ರೀದ್ ಹಬ್ಬದ ನಂತರ ಇಬ್ಬರಿಗೂ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಇಬ್ಬರೂ ಸಹ ಸಕ್ಕರೆ ಮಂಡಿಯಲ್ಲಿರುವ ಶಬೀಲ್‌ನ ಸಂಬಂಧಿಕರ ಒಡೆತನದ ಪಾಳು ಬಿದ್ದ ಕಟ್ಟಡದ ಬಳಿ ಭೇಟಿಯಾಗುತ್ತಿದ್ದರು ಎಂದು ಡಿಸಿಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.
ಕೃತ್ಯಕ್ಕೆ ಬಳಸಿದ ಆಯುಧ, ನಿಖರ ಕಾರಣಗಳ ಕುರಿತು ಆರೋಪಿಯ ಬಂಧನದ ಬಳಿಕ ತಿಳಿಯಬೇಕಿದ್ದು ಆತನ ಬಂಧನಕ್ಕಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.



