Thursday, May 21, 2026
Google search engine
Homeರಾಜ್ಯಲಕ್ಕುಂಡಿ ಸ್ಮಾರಕಗಳ ಪತ್ತೆಗೆ ಸ್ಯಾಟಲೈಟ್ ಇಮೇಜಿಂಗ್ ಟೆಕ್ನಾಲಜಿ ಬಳಕೆ

ಲಕ್ಕುಂಡಿ ಸ್ಮಾರಕಗಳ ಪತ್ತೆಗೆ ಸ್ಯಾಟಲೈಟ್ ಇಮೇಜಿಂಗ್ ಟೆಕ್ನಾಲಜಿ ಬಳಕೆ

ಬೆಂಗಳೂರು: ಐತಿಹಾಸಿಕ ಲಕ್ಕುಂಡಿಯಲ್ಲಿರುವ ನೂರೊಂದು ಬಾವಿ, ನೂರೊಂದು ದೇವಾಲಯಗಳನ್ನು ಶೀಘ್ರದಲ್ಲಿಯೇ ಸ್ಯಾಟಲೈಟ್ ಇಮೇಜಿಂಗ್ ಟೆಕ್ನಾಲಜಿಯ ಮೂಲಕ NIAS ಸಂಸ್ಥೆ (ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ) ಸಹಕಾರದೊಂದಿಗೆ ಪತ್ತೆ ಹಚ್ಚಿ ದೇಶಕ್ಕೆ ಅನಾವರಣಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ತಿಳಿಸಿದರು.

ಬೆಂಗಳೂರಿನ ವಿಧಾನ ಸೌಧದಲ್ಲಿ ಲಕ್ಕುಂಡಿಯಲ್ಲಿರುವ ನೂರೊಂದು ಬಾವಿ ನೂರೊಂದು ದೇವಾಲಯಗಳನ್ನು ಹೊರತರುವ ಸಲುವಾಗಿ NIAS ಸಂಸ್ಥೆ ವಿಜ್ಞಾನಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಾ ಈಗಾಗಲೇ 2023 ರಿಂದ ಲಕ್ಕುಂಡಿಯಲ್ಲಿ 32 ದೇವಾಲಯಗಳು, 28 ಬಾವಿಗಳು ಹಾಗೂ 07 ಇತರೆ ಸ್ಮಾರಕಗಳನ್ನು ಒಳಗೊಂಡಂತೆ ಒಟ್ಟು 70ಕ್ಕೂ ಹೆಚ್ಚು ಸ್ಮಾರಕಗಳನ್ನು ಗುರುತಿಸಲಾಗಿದೆ. ಮುಂಬರುವ ಡಿಸೆಂಬರ್ 31, 2026 ರೊಳಗೆ ಲಕ್ಕುಂಡಿಯಲ್ಲಿ 101 ಬಾವಿ 101 ದೇವಾಲಯಗಳನ್ನು NIAS ಸಂಸ್ಥೆ ಹಾಗೂ ಸ್ಥಳೀಯರ ಸಹಭಾಗಿತ್ವದೊಂದಿಗೆ ಅನಾವರಣಗೊಳಿಸಲು ಅಗತ್ಯ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.

ಲಕ್ಕುಂಡಿಯನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ (ಯುನೆಸ್ಕೋ) ಸೇರಿಸಲು ಪ್ರಸ್ತಾವನೆ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು ಯುನೆಸ್ಕೋ ಪಟ್ಟಿಗೆ ಸೇರಿಸಲು ನವಂಬರ್-2024 ರಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಭಾಗ-1ನ್ನು ನಡೆಸಿ 1500ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಅನ್ವೇಷಿಸಲಾಗಿದೆ. ಜೊತೆಗೆ 2026 ರ ಮೇ-02 ರಿಂದ ಪ್ರಾಚ್ಯಾವಶೇಷಗಳ ಅನ್ವೇಷಣೆ ಭಾಗ-2 ನ್ನು ನಡೆಸುತ್ತಿದ್ದು, ಈಗಾಗಲೇ ಎರಡನೇ ಹಂತದಲ್ಲಿ 1800 ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ದೊರೆತಿವೆ.

ಮೊದಲ ಹಂತ ಮತ್ತು ಎರಡನೇ ಹಂತದ ಪ್ರಾಚ್ಯಾವಶೇಷಗಳನ್ನು ಸೇರಿಸಿ ಜೂನ್-30 ರ ಒಳಗಾಗಿ ದಾಖಲೆಯ ರೀತಿಯ 5000ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳನ್ನು ಅನ್ವೇಷಿಸಿ ಅವುಗಳನ್ನು ಬಯಲು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲು ಸಹ ಅಗತ್ಯ ಕ್ರಮ ವಹಿಸಲಾಗಿದೆ ಎಂದರು.

ಲಕ್ಕುಂಡಿಯಲ್ಲಿರುವ ದೇವಸ್ಥಾನಗಳಿಗೆ ಹೊಸ ರೂಪ ನೀಡಲು ಈಗಾಗಲೇ ಫೆಬ್ರವರಿ ಮಾಹೆಯಲ್ಲಿ ಪಂಚ ದೇವಾಲಯ ಮತ್ತು ಪಂಚ ಬಾವಿಗಳ ಅನಾವರಣ ಕೈಗೊಂಡಿದ್ದು, ಮೇ-2 ರಿಂದ ದಶ ಬಾವಿ ದಶ ದೇವಾಲಯಗಳ ಅನಾವರಣ ಕಾರ್ಯವೂ ಸಹ ನಡೆಯುತ್ತಿದ್ದು 10 ಕೋಟಿ ವೆಚ್ಚದಲ್ಲಿ 06 ಸ್ಮಾರಕಗಳನ್ನು ಸಂಪೂರ್ಣವಾಗಿ ಸಂರಕ್ಷಣೆ ಮಾಡಿ ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.

2026-27 ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ 10ಕ್ಕಿಂತ ಹೆಚ್ಚು ಸ್ಮಾರಕಗಳನ್ನು ಸಂರಕ್ಷಣೆ ಮಾಡಿ ಅಭಿವೃದ್ಧಿಗೊಳಿಸಲಾಗುವುದು. ಒಟ್ಟಾರೆಯಾಗಿ ಲಕ್ಕುಂಡಿಯನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಕಾರ್ಯಕ್ಕೆ (ಯುನೆಸ್ಕೋ ಪಟ್ಟಿಗೆ ಸೇರಿಸಲು) ಮತ್ತಷ್ಟು ಉಪಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಸಭೆಯಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ: ಕಿರಣ ಕುಮಾರ್ ರವರು ಮಾತನಾಡಿ, ಲಕ್ಕುಂಡಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೆರ್ಪಡೆಯಾಗುವುದು ಅಗತ್ಯವಾಗಿದೆ. ಆ ದಿಸೆಯಲಿ ಪ್ರಯತ್ನ ಸ್ವಾಗತಾರ್ಹ. ಸ್ಯಾಟಲೈಟ್ ತಂತ್ರಜ್ಞಾನ ಬಳಸಿ ಲಕ್ಕುಂಡಿಯಲ್ಲಿರುವ 101 ಭಾವಿ ಹಾಗೂ 101 ದೇವಾಲಯಗಳನ್ನು ಅನಾವರಣಗೊಳಿಸುವ ಪ್ರಯತ್ನಕ್ಕೆ ಕೈಜೊಡಿಸುವುದಾಗಿ ಇಸ್ರೋದ ಮಾಜಿ ಅಧ್ಯಕ್ಷರು ತಿಳಿಸಿದರು.

ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ಮಾತನಾಡಿ, ಲಕ್ಕುಂಡಿ ಯುನೆಸ್ಕೋ ಪಟ್ಟಿಗೆ ಸೇರಿಸಲು ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ ಕೈಗೊಂಡಿರುವ ಎಲ್ಲಾ ಕಾರ್ಯಗಳಿಗೆ ಸ್ಥಳೀಯರ ಸಂಪೂರ್ಣ ಸಹಕಾರವಿದೆ ಎಂದರು.

ಸಭೆಯಲ್ಲಿ 2023 ರಿಂದ ಇಲ್ಲಿಯವರೆಗೆ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳ ಕುರಿತು ಪ್ರಾಧಿಕಾರದ ಆಯುಕ್ತ ಡಾ: ಶರಣು ಗೋಗೇರಿ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದರು. 101 ಬಾವಿ 101 ದೇವಾಲಯಗಳನ್ನು ಪತ್ತೆಹಚ್ಚುವಲ್ಲಿ ಸ್ಯಾಟಲೈಟ್ ತಂತ್ರಜ್ಞಾನದ ಬಳಕೆ ಕುರಿತು NIAS ಸಂಸ್ಥೆಯ ಪ್ರೊಫೆಸರ್ ಎಂ.ಬಿ. ರಜನಿ ಪ್ರಾತ್ಯಕ್ಷಿಕೆ ನೀಡಿದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ: ಕೆ.ವಿ. ತ್ರಿಲೋಕಚಂದ್ರ, ಪ್ರವಾಸೋದ್ಯಮ ಇಲಾಖೆ ಆಯುಕ್ತ ಅಕ್ರಂ ಪಾಷಾ, ಇಸ್ರೋದ ವಿಜ್ಞಾನಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರೊ. ರಾಮನಗೌಡ ನಾಡಗೌಡರ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯಮಟ್ಟದ ಸಲಹಾ ಸಮಿತಿ ಸದಸ್ಯರಾದ ಸಿದ್ಧಲಿಂಗೇಶ್ವರ ಪಾಟೀಲ ಹಾಗೂ ಅ.ಧ. ಕಟ್ಟಿಮನಿ. ಪುರಾತತ್ತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕರಾದ ಡಾ: ಆರ್. ಶೇಜೇಶ್ವರ, ಸ್ಮಿತಾ ರೆಡ್ಡಿ, ಇಸ್ರೋ ಹಾಗೂ NIAS ಸಂಸ್ಥೆಯ ವಿಜ್ಞಾನಿಗಳು, ಸಂಶೋಧಕರು ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments