Wednesday, May 20, 2026
Google search engine
Homeಕಾನೂನುಒಂದನೇ ತರಗತಿಗೆ ದಾಖಲಾತಿ ವಯೋಮಿತಿ ಸಡಿಲಿಕೆ ಕುರಿತು ಸೂಕ್ತ ತೀರ್ಮಾನಕ್ಕೆ ಹೈಕೋರ್ಟ್ ಆದೇಶ

ಒಂದನೇ ತರಗತಿಗೆ ದಾಖಲಾತಿ ವಯೋಮಿತಿ ಸಡಿಲಿಕೆ ಕುರಿತು ಸೂಕ್ತ ತೀರ್ಮಾನಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು,ಮೇ.20: ಬರುವ 2026-27 ನೇ ಶೈಕ್ಷಣಿಕ ಸಾಲಿಗೆ ಒಂದನೇ ತರಗತಿಗೆ ದಾಖಲಾಗಲು ವಯೋಮಿತಿ ಸಡಲಿಕೆ ವಿಚಾರವನ್ನು ಮರು ಪರಿಶೀಲಿಸಿ ತಮ್ಮ ಅಭಿಪ್ರಾಯ, ಶಿಫಾರಸ್ಸನ್ನು ಒಂದು ವಾರದೊಳಗೆ ಸಲ್ಲಿಸುವಂತೆ ರಾಜ್ಯ ಹೈಕೋರ್ಟ್ ಶಾಲಾ ಶಿಕ್ಷಣ ಇಲಾಖೆಗೆ ಆದೇಶಿಸಿದೆ.

ವಯೋಮಿತಿ ವಿಚಾರದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ತೊಂದರೆ ಎದುರಿಸುತ್ತಿದ್ದು, ಈ ಸಂಬಂಧ ಒಂದು ವಾರದೊಳಗೆ ಎಲ್ಲಾ ಆಯಾಮಗಳಲ್ಲೂ ಪರಿಶೀಲಿಸಿ ಆದೇಶ ಹೊರಡಿಸುವಂತೆ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ.

6 ಮಂದಿ ಅಪ್ರಾಪ್ತ ವಿದ್ಯಾರ್ಥಿಗಳು ಹಾಗೂ ಅವರ ಪರವಾಗಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅಪ್ರಾಪ್ತರ ಮನವಿಗೆ ಸ್ಪಂದಿಸಿದೆ. ವಯೋಮಿತಿ ನಿಗದಿಪಡಿಸಿ ಶಾಲಾ ಶಿಕ್ಷಣ ಇಲಾಖೆ ಇದೇ ವರ್ಷದ ಮಾರ್ಚ್ 28 ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಇವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರು 6 ವರ್ಷ ಪೂರ್ಣಗೊಂಡಿಲ್ಲ. ಆದರೆ 2025-26 ನೇ ಸಾಲಿನ ಪೂರ್ವ ಪ್ರಾಥಮಿಕ ಶಿಕ್ಷಣ ಪೂರೈಸಿದ್ದಾರೆ. ಸರ್ಕಾರದ ಆದೇಶದಿಂದ ಸುಮಾರು ಐದು ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಐದು ಲಕ್ಷ ವಿದ್ಯಾರ್ಥಿಗಳು ಮತ್ತೆ ಯುಕೆಜಿ ಅಧ್ಯಯನ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.

ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ವಯೋಮಿತಿ ಸಡಿಲಿಸಿ ಶಾಲಾ ದಾಖಲಾತಿಗೆ ಅವಕಾಶ ಕಲ್ಪಿಸಬೇಕೆಂದು ನ್ಯಾಯಪೀಠದ ಗಮನ ಸೆಳೆದಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠಕ್ಕೆ ಪ್ರತಿವಾದಿಗಳ ಪರ ವಕೀಲರು, ನ್ಯಾಯಸಮ್ಮತ ಸಮಯ ನೀಡಿದಲ್ಲಿ ಪ್ರತಿವಾದಿಗಳು ಆ ಮನವಿಯನ್ನು ಪರಿಗಣಿಸಿ ಅಗತ್ಯ ಆದೇಶವನ್ನು ಹೊರಡಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.

2026–27ನೇ ಶೈಕ್ಷಣಿಕ ವರ್ಷದ ಪ್ರಥಮ ತರಗತಿ ಪ್ರವೇಶಕ್ಕಾಗಿ ಕಳೆದ ಶೈಕ್ಷಣಿಕ ವರ್ಷದಲ್ಲಿ ನೀಡಿದ ಮಾದರಿಯಲ್ಲಿ ಕನಿಷ್ಠ ವಯೋಮಿತಿಯಲ್ಲಿ ಒಮ್ಮೆ ಸಡಿಲಿಕೆ ನೀಡಿ 5 ವರ್ಷ 5 ತಿಂಗಳು ವಯಸ್ಸಿನ ಮಕ್ಕಳಿಗೂ ಪ್ರವೇಶ ಅವಕಾಶ ಕಲ್ಪಿಸಬೇಕೆಂದು ನ್ಯಾಯಪೀಠವನ್ನು ಕೋರಿದ್ದರು.

ಕಳೆದ ಹಲವಾರು ವರ್ಷಗಳಿಂದ ಶಾಲೆಗಳು ಅನುಸರಿಸುತ್ತಿದ್ದ ಪ್ರವೇಶ ಪದ್ಧತಿ ಮತ್ತು ಅರ್ಹತಾ ಮಾನದಂಡಗಳ ಆಧಾರದ ಮೇಲೆ ಶಾಲಾ ಶಿಕ್ಷಣ ವ್ಯವಸ್ಥೆಗೆ ಸೇರ್ಪಡೆಯಾಗಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಉತ್ತಮ ನಂಬಿಕೆಯಿಂದ ಹಾಗೂ 2026–27ನೇ ಶೈಕ್ಷಣಿಕ ವರ್ಷದಲ್ಲಿ ಅವರು ಪ್ರಥಮ ತರಗತಿಗೆ ಮುಂದುವರಿಯುತ್ತಾರೆ ಎಂಬ ನಿರೀಕ್ಷೆಯೊಂದಿಗೆ ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಿಸಿದ್ದರು.

ಪ್ರೀ-ಸ್ಕೂಲ್ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ಪ್ರಥಮ ತರಗತಿಗೆ ಸಿದ್ಧರಾಗಿರುವ ಅನೇಕ ಮಕ್ಕಳು ಈಗ ಒಂದು ಸಂಪೂರ್ಣ ಶೈಕ್ಷಣಿಕ ವರ್ಷ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ ಎಂದು ಅರ್ಜಿದಾರರು ನ್ಯಾಯಪೀಠದ ಗಮನ ಸೆಳದಿದ್ದರು.

ಪತ್ರ ಬರೆದ ಪೋಷಕರು

ಹೈಕೋರ್ಟ್ ಆದೇಶದಂತೆ ನಮ್ಮ ಮಕ್ಕಳ ಮುಂದಿನ ವರ್ಷದ ಶಾಲಾ ದಾಖಲಾತಿಗೆ ಧಕ್ಕೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಪ್ರಾಪ್ತ ವಿದ್ಯಾರ್ಥಿಗಳ ಪಾಲಕರು ಮುಖ್ಯಕಾರ್ಯದರ್ಶಿ, ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಪತ್ರ ಬರೆದಿರುವ ಪೋಷಕರು, ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರವು 5 ವರ್ಷ 5 ತಿಂಗಳು ವಯೋಮಿತಿವರೆಗೆ ಸಡಿಲಿಕೆ ನೀಡಿದ್ದನ್ನು ಪರಿಗಣಿಸಿ, 2026–27ನೇ ಶೈಕ್ಷಣಿಕ ವರ್ಷದ ಪ್ರಥಮ ತರಗತಿ ಪ್ರವೇಶಕ್ಕೂ ಇದೇ ರೀತಿಯ ಒಮ್ಮೆಯ ಸಡಿಲಿಕೆಯನ್ನು ನೀಡುವಂತೆ ವಿನಮ್ರವಾಗಿ ಮನವಿ ಮಾಡುತ್ತೇವೆ. ಇದರಿಂದ ಮಕ್ಕಳ ಶೈಕ್ಷಣಿಕ ನಿರಂತರತೆಯನ್ನು ಕಾಪಾಡುತ್ತದೆ. ಅನಗತ್ಯ ಭಾವನಾತ್ಮಕ ಮತ್ತು ಶೈಕ್ಷಣಿಕ ವ್ಯತ್ಯಯವನ್ನು ತಪ್ಪಿಸುತ್ತದೆ. ಪೋಷಕರು ಹಾಗೂ ಶಾಲೆಗಳಿಗೆ ಸ್ಪಷ್ಟತೆ ಮತ್ತು ನೆಮ್ಮದಿಯನ್ನು ಒದಗಿಸುತ್ತದೆ. ಭವಿಷ್ಯದಲ್ಲಿ ಪರಿಷ್ಕೃತ ನಿಯಮಗಳ ಸುಗಮ ಜಾರಿಗೆ ಸಹಕಾರಿಯಾಗುತ್ತದೆ ಎಂದು ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments