ನವದೆಹಲಿ: ಆಫ್ರಿಕಾ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಎಬೋಲಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮೇ 28ರಂದು ನಿಗದಿಯಾಗಿದ್ದ ಶೃಂಗಸಭೆಯಲ್ಲಿ ಮುಂದೂಡಲಾಗಿದೆ.
ಆಫ್ರಿಕಾದ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದಲ್ಲಿ ಎಬೊಲಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಇದುವರೆಗೆ 131ಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ. ಅಲ್ಲದೇ ನೆರೆಯ ದೇಶಗಳಿಗೆ ಹರಡುವ ಭೀತಿ ಇದೆ.
ದೆಹಲಿಯಲ್ಲಿ ಮೇ 28ರಂದು ಭಾರತ ಮತ್ತು ಆಫ್ರಿಕಾದ ದೇಶಗಳ ಜೊತೆ ಶೃಂಗಸಭೆ ಆಯೋಜಿಸಲಾಗಿದ್ದು, ಹಲವು ಮಹತ್ವದ ಒಪ್ಪಂದಗಳ ಕುರಿತು ಚರ್ಚೆ ನಡೆಸಬೇಕಿತ್ತು.
ಕಾಂಗೋ ಸೇರಿದಂತೆ ಆಫ್ರಿಕಾದ ಕೆಲವು ದೇಶಗಳಲ್ಲಿ ಎಬೋಲಾ ವೈರಸ್ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳು ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಆಫ್ರಿಕಾದ ದೇಶಗಳಿಂದ ಬರುವ ಅಥವಾ ಆ ದೇಶಗಳ ಮೂಲಕ ಪ್ರಯಾಣಿಸುವ ಅನಾರೋಗ್ಯ ಪೀಡಿತ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣವೇ ಅಲ್ಲಿನ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು ರಾಜ್ಯಗಳ ಜೊತೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿ, ಎಬೋಲಾ ವೈರಸ್ ತಡೆಗಟ್ಟಲು ದೇಶದಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಚರ್ಚಿಸಿದ ಬೆನ್ನಲ್ಲೇ ದೆಹಲಿ ವಿಮಾನ ನಿಲ್ದಾಣವು ಈ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಂಡಿದೆ.
ಮಾರ್ಗಸೂಚಿಯಲ್ಲಿ ಕಾಂಗೋ , ಉಗಾಂಡ ಮತ್ತು ದಕ್ಷಿಣ ಸುಡಾನ್ ದೇಶಗಳನ್ನು “ಹೈ-ರಿಸ್ಕ್” ದೇಶಗಳ ಪಟ್ಟಿಗೆ ಸೇರಿಸಲಾಗಿದೆ. ಪ್ರಸ್ತುತ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಈ ಸಾಂಕ್ರಾಮಿಕ ರೋಗದ ತೀವ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದೆ.
ಪ್ರಯಾಣಿಕರು ಗಮನಕ್ಕೆ
ವಿಮಾನ ನಿಲ್ದಾಣದ ಪ್ರಕಟಣೆಯ ಪ್ರಕಾರ, ತೀವ್ರ ಜ್ವರ, ಅತಿಯಾದ ಸುಸ್ತು ಅಥವಾ ಆಯಾಸ, ತಲೆನೋವು, ಸ್ನಾಯು ನೋವು, ವಾಂತಿ, ಭೇದಿ, ಗಂಟಲು ನೋವು ಮತ್ತು ಯಾವುದೇ ಸ್ಪಷ್ಟ ಕಾರಣವಿಲ್ಲದೆ ದೇಹದಿಂದ ರಕ್ತಸ್ರಾವವಾಗುವುದು ಎಬೋಲಾ ವೈರಸ್‌ನ ಪ್ರಮುಖ ಲಕ್ಷಣಗಳಾಗಿವೆ. ಎಬೋಲಾ ಪೀಡಿತ ಅಥವಾ ಶಂಕಿತ ವ್ಯಕ್ತಿಯ ರಕ್ತ ಹಾಗೂ ದೇಹದ ಇತರ ದ್ರವಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಪ್ರಯಾಣಿಕರು ಇಮಿಗ್ರೇಷನ್ ಪ್ರಕ್ರಿಯೆಗಿಂತ ಮುಂಚಿತವಾಗಿಯೇ ವಿಮಾನ ನಿಲ್ದಾಣದ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಬೇಕಾಗುತ್ತದೆ.
ಈ ಹೈ-ರಿಸ್ಕ್ ದೇಶಗಳಿಂದ ಭಾರತಕ್ಕೆ ಬಂದಿಳಿದ 21 ದಿನಗಳ ಒಳಗಾಗಿ ಪ್ರಯಾಣಿಕರಲ್ಲಿ ಇಂತಹ ಯಾವುದೇ ಲಕ್ಷಣಗಳು ಕಂಡುಬಂದರೂ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಮತ್ತು ತಮ್ಮ ಪ್ರಯಾಣದ ಇತಿಹಾಸವನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಡ್ಡಾಯವಾಗಿ ತಿಳಿಸಬೇಕೆಂದು ಸೂಚಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಅಂತರರಾಷ್ಟ್ರೀಯ ಆರೋಗ್ಯ ನಿಯಮಗಳ ಹಿತದೃಷ್ಟಿಯಿಂದ ವಿಮಾನ ನಿಲ್ದಾಣದಲ್ಲಿ ನಡೆಸಲಾಗುವ ಆರೋಗ್ಯ ತಪಾಸಣೆಗೆ ಎಲ್ಲರೂ ಸಹಕರಿಸಬೇಕೆಂದು ಅಧಿಕಾರಿಗಳು ವಿನಂತಿಸಿದ್ದಾರೆ.
ರೋಗದ ಲಕ್ಷಣಗಳು
ವೈರಸ್ ಮನುಷ್ಯನ ದೇಹವನ್ನು ಸೇರಿದ ನಂತರ ಲಕ್ಷಣಗಳು ಕಾಣಿಸಿಕೊಳ್ಳಲು 2-21 ದಿನಗಳ ಸಮಯ ತೆಗೆದುಕೊಳ್ಳುತ್ತದೆ. ಆರಂಭಿಕ ಲಕ್ಷಣಗಳು ಸಾಮಾನ್ಯ ಜ್ವರದಂತೆ ಕಂಡರೂ, ದಿನಕಳೆದಂತೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತವೆ. ಹಠಾತ್ ಉಂಟಾಗುವ ತೀವ್ರ ಜ್ವರ, ವಿಪರೀತ ದೈಹಿಕ ಸುಸ್ತು, ಕೀಲು ಮತ್ತು ಸ್ನಾಯುಗಳ ನೋವು ಹಾಗೂ ತಲೆನೋವು ಕಾಣಿಸಿಕೊಳ್ಳುತ್ತದೆ. ರೋಗದ ತೀವ್ರತೆ ಹೆಚ್ಚಾದಾಗ ಗಂಟಲು ನೋವು, ವಾಂತಿ, ಭೇದಿ ಮತ್ತು ಚರ್ಮದ ಮೇಲೆ ಕೆಂಪು ದದ್ದುಗಳು ಏಳುತ್ತವೆ.
ಅಂತಿಮ ಹಂತದಲ್ಲಿ ವೈರಸ್ ಲಿವರ್ ಮತ್ತು ಮೂತ್ರಪಿಂಡಗಳ ಕಾರ್ಯನಿರ್ವಹಣೆಯನ್ನು ಸಂಪೂರ್ಣವಾಗಿ ಹಾನಿಗೊಳಿಸುತ್ತದೆ. ಇದರ ಪರಿಣಾಮವಾಗಿ ದೇಹದ ಒಳಗೆ ಮತ್ತು ಹೊರಗಿನ ಅಂಗಾಂಗಗಳಿಂದ (ಕಣ್ಣು, ಮೂಗು, ಬಾಯಿ ಮತ್ತು ಮಲದ್ವಾರದ ಮೂಲಕ) ತೀವ್ರ ರಕ್ತಸ್ರಾವವಾಗಿ, ಬಹು ಅಂಗಾಂಗ ವೈಫಲ್ಯದಿಂದ ರೋಗಿ ಸಾವನ್ನಪ್ಪುತ್ತಾನೆ. ಇದರ ಮರಣ ಪ್ರಮಾಣ ಶೇಕಡಾ 50-90 ರಷ್ಟಿರುತ್ತದೆ.



