Sunday, May 24, 2026
Google search engine
Homeಕಾನೂನುಅಪಘಾತ ಮಾಡಿದರೂ ಮಾನವೀಯತೆ ಮೆರೆದ ಚಾಲಕನಿಗೆ 1 ದಿನದ ಶಿಕ್ಷೆ ವಿಧಿಸಿದ ಹೈಕೋರ್ಟ್

ಅಪಘಾತ ಮಾಡಿದರೂ ಮಾನವೀಯತೆ ಮೆರೆದ ಚಾಲಕನಿಗೆ 1 ದಿನದ ಶಿಕ್ಷೆ ವಿಧಿಸಿದ ಹೈಕೋರ್ಟ್

ಬೆಂಗಳೂರು: ರಸ್ತೆ ಅಪಘಾತ ನಡೆದ ತಕ್ಷಣವೇ ಸ್ಥಳದಿಂದ ಪರಾರಿಯಾಗದೆ ಗಾಯಾಳುವನ್ನು ಸ್ವತಃ ತನ್ನದೇ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಚಾಲಕನೊಬ್ಬನ ಜೈಲು ಶಿಕ್ಷೆಯನ್ನು ಒಂದು ವರ್ಷದಿಂದ ಒಂದು ದಿನಕ್ಕೆ (ಕೋರ್ಟ್ ಕಲಾಪ ಮುಗಿಯುವವರೆಗೆ) ಕಡಿತಗೊಳಿಸಿ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿಕೆರೆಯ ನಿವಾಸಿ ರಿಯಾಜ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರಿದ್ದ ಏಕಸದಸ್ಯ ಪೀಠ, ಅಜಾಗರೂಕತೆಯ ಚಾಲನೆಯಿಂದ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷದ ಜೈಲು ಶಿಕ್ಷೆಯನ್ನು ಮಾರ್ಪಡಿಸಿ ಆದೇಶಿಸಿದೆ.

ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗದೆ ಸಂತ್ರಸ್ತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿರುವುದು ಶಿಕ್ಷೆಯನ್ನು ಕಡಿಮೆ ಮಾಡುವುದಕ್ಕೆ ಕಾರಣವಾಗಿರುವ ಅಂಶವಾಗಿದೆ. ಅಲ್ಲದೆ, ಶಿಕ್ಷೆಗೆ ಗುರಿಯಾಗಿರುವ ರಿಯಾಜ್ ಕೂಡ ನಂತರದ ದಿನಗಳಲ್ಲಿ ಮತ್ತೊಂದು ಅಪಘಾತಕ್ಕೆ ಒಳಗಾಗಿ ಬಲಗಾಲಿಗೆ ರಾಡ್ ಅಳವಡಿಸಲಾಗಿದ್ದು, ಸದ್ಯ ವೃತ್ತಿಪರ ಚಾಲನೆ ಮಾಡಲು ಸಾಧ್ಯವಾಗದೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಾರೆ ಎಂಬ ಅಂಶ ದಾಖಲೆಗಳಿಂದ ಗೊತ್ತಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.

ನ್ಯಾಯಾಲಯದ ಸಲಹೆಯಂತೆ, ಅಪಘಾತದಲ್ಲಿ ಮೃತಪಟ್ಟವರ ಕುಟುಂಬದವರು ಹೆಚ್ಚುವರಿ ಪರಿಹಾರ ನೀಡಿದರೆ ಶಿಕ್ಷೆ ಕಡಿತಗೊಳಿಸಲು ಒಪ್ಪಿಗೆ ಸೂಚಿಸಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ಅಂದಿನ ನ್ಯಾಯಾಲಯದ ಕಲಾಪ ಮುಗಿಯುವವರೆಗೆ ಶಿಕ್ಷೆ ವಿಧಿಸಿತು. ಇದರೊಂದಿಗೆ ಮೃತರ ಪತ್ನಿ ಮತ್ತು ಮಗನಿಗೆ 1 ಲಕ್ಷ ರೂಪಾಯಿ ಹೆಚ್ಚುವರಿ ಪರಿಹಾರ ನೀಡುವಂತೆ ಆದೇಶಿಸಿದೆ.

ಈ ಮೊತ್ತವನ್ನು ತಲಾ 50 ಸಾವಿರ ರೂ.ಗಳಂತೆ ಎರಡು ಕಂತುಗಳಲ್ಲಿ ಜೂನ್ 30ರ ಒಳಗಾಗಿ ಪಾವತಿಸಬೇಕು. ಒಂದು ವೇಳೆ ಈ ಹಣ ಪಾವತಿಸಲು ವಿಫಲವಾದರೆ, ಹಳೆಯ ಒಂದು ವರ್ಷದ ಜೈಲು ಶಿಕ್ಷೆ ತಾನಾಗಿಯೇ ಮರುಸ್ಥಾಪನೆಯಾಗಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:

2015ರ ಜುಲೈ 15ರಂದು ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಬೀಚ್ ರಸ್ತೆ ಬಳಿ ಅರ್ಜಿದಾರ ರಿಯಾಜ್ ಅಹ್ಮದ್ ಚಲಾಯಿಸುತ್ತಿದ್ದ ಕಾರು ಆನಂದ್ ಶೆಟ್ಟಿ ಎಂಬ ಪಾದಚಾರಿಗೆ ಡಿಕ್ಕಿ ಹೊಡೆದಿತ್ತು. ಅಪಘಾತ ನಡೆದ ತಕ್ಷಣ ರಿಯಾಜ್ ಮತ್ತು ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದ ಆನಂದ್ ಶೆಟ್ಟಿ ಅವರನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆದರೆ, ದುರದೃಷ್ಟವಶಾತ್ ಆನಂದ್ ಶೆಟ್ಟಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಸಾವನ್ನಪ್ಪಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಮಂಗಳೂರಿನ ಸೆಷನ್ಸ್ ನ್ಯಾಯಾಲಯ ರಿಯಾಜ್‌ಗೆ 1 ವರ್ಷದ ಸಾಧಾರಣ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಿಯಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments