ಕಪ್ಪೆಚಿಪ್ಪು ತೆಗೆಯಲು ಹೋದ 8 ಮಂದಿ ಜಲ ಸಮಾಧಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆ ಹಕ್ಕಲು ನದಿಯಲ್ಲಿ ಸಂಭವಿಸಿದೆ.
ಲಕ್ಷ್ಮಿ ಮಾದೇವ ನಾಯ್ಕ (38), ಲಕ್ಷ್ಮಿ ಮಹಾದೇವ ನಾಯ್ಕ, ಲಕ್ಷ್ಮಿ ಶಿವರಾಂ ನಾಯ್ಕ (39), ಉಮೇಶ್ ಮಂಜುನಾಥ್ ನಾಯ್ಕ (42), ಮಾಸ್ತಮ್ಮ ಮಂಜುನಾಥ್ (43), ಲಕ್ಷ್ಮಿ ಅಣ್ಣಪ್ಪನಾಯ್ಕ (44), ಜ್ಯೋತಿ ನಾಗಪ್ಪ ನಾಯ್ಕ (37), ಮಾಲತಿ ಜಟ್ಟಪ್ಪ ನಾಯ (38) ಮೃತ ದುರ್ದೈವಿಗಳು.
ಮೃತಪಟ್ಟವರೆಲ್ಲರೂ ಭಟ್ಕಳದ ಪಡುಶಿರಾಲಿ ಮೂಲದವರಾಗಿದ್ದು, ಒಂದೇ ಕುಟುಂಬದವರು ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟು 13 ಮಂದಿ ಕಪ್ಪೆಚಿಪ್ಪು ತೆಗೆಲು ಹೋಗಿದ್ದರು. ಈ ಪೈಕಿ 8 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಅಸ್ವಸ್ಥರಾಗಿದ್ದು, ಅವರನ್ನ ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಮೂವರಿಗಾಗಿ ಇನ್ನುಳಿದವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ನದಿ ಪ್ರದೇಶದಲ್ಲಿ ಅಪಾರ ಜನರು ಸೇರಿದ್ದು, ಉಳಿದವರಾದರೂ ಬದುಕಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಮೃತಪಟ್ಟ 8 ಮಂದಿಯ ಮೃತದೇಹಗಳನ್ನ ಭಟ್ಕಳ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
‘ಕಪ್ಪೆ ಚಿಪ್ಪು ಆರಿಸಲು ನದಿಗೆ ಇಳಿದಿದ್ದವರು ಪರಸ್ಪರ ಕೈ ಹಿಡಿದು ಸಾಗುತ್ತಿದ್ದರು. ತಡರಾತ್ರಿ ಸುರಿದ ಮಳೆಗೆ ನದಿಯಲ್ಲಿ ನೀರಿನ ಹರಿವು ಹೆಚ್ಚಿತ್ತು. ಜೊತೆಗೆ ಸಮುದ್ರದ ಅಲೆಗಳ ಅಬ್ಬರದಿಂದ ನೀರಿನ ಮಟ್ಟ ಏರಿಕೆಯಾಗಿ, ಮುಳುಗಿರುವ ಶಂಕೆ ಇದೆ. ಘಟನೆಯಲ್ಲಿ ನಾಗರತ್ನಾ ಮತ್ತು ಮಹಾದೇವಿ ಎಂಬುವವರು ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಚಿಕಿತ್ಸೆಗೆ ಮಣಿಪಾಲಕ್ಕೆ ಕರೆದೊಯ್ಯಲಾಗಿದೆ. ಇನ್ನೂ ಕೆಲವರು ಕಣ್ಮರೆಯಗಿರುವ ಶಂಕೆ ಇದ್ದು, ಪತ್ತೆ ಕಾರ್ಯ ನಡೆಸಲಾಗುತ್ತಿದೆ’ ಎಂದು ಭಟ್ಕಳ ಠಾಣೆ ಪೊಲೀಸರು ತಿಳಿಸಿದ್ದಾರೆ.



