ಸ್ಫೋಟಕ ತುಂಬಿದ ಕಾರು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಾಕಿಸ್ತಾನದ ಸೈನಿಕರು ಸೇರಿದಂತೆ 24 ಮಂದಿ ಮೃತಪಟ್ಟ ಘಟನೆ ಪಾಕಿಸ್ತಾನದ ನೈಋತ್ಯ ಪ್ರಾಂತ್ಯ ಬಲೂಚಿಸ್ತಾನದಲ್ಲಿ ನಡೆದಿದೆ.
ಭಾನುವಾರ ಬೆಳಿಗ್ಗೆ ರಾಜಧಾನಿ ಕ್ವೆಟ್ಟಾದಲ್ಲಿ ದಾಳಿ ನಡೆದಿದ್ದು, ಮೃತರಲ್ಲಿ ಸೇನಾ ಸಿಬ್ಬಂದಿಯೂ ಸೇರಿದ್ದಾರೆ. 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿ ‘ಎಎಫ್‌ಪಿ’ಗೆ ಮಾಹಿತಿ ನೀಡಿದ್ದಾರೆ.
ಕ್ವೆಟ್ಟಾದ ಚಮನ್ ಪಟ್ಟಾಕ್‌ನಲ್ಲಿ ರೈಲು ಸಿಗ್ನಲ್ ದಾಟುತ್ತಿದ್ದಾಗ ಸ್ಫೋಟಕ ತುಂಬಿದ ಕಾರೊಂದು ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಪರಿಣಾಮ ಭಾರಿ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸ್ಫೋಟದಿಂದಾಗಿ ರೈಲಿಗೆ ಭಾಗಶಃ ಹಾನಿಯಾಗಿದ್ದು, ಆ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ 10 ವಾಹನಗಳಿಗೂ ಹಾನಿಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಸಮೀಪದ ಕಟ್ಟಡಗಳ ಕಿಟಕಿಗಳು ಮತ್ತು ಗಾಜುಗಳು ಪುಡಿಯಾಗಿವೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ರೈಲಿನ ಬೋಗಿಯೊಂದು ನಜ್ಜುಗುಜ್ಜಾಗಿದ್ದು, ಅವಶೇಷಗಳ ನಡುವೆ ಬದುಕುಳಿದವರನ್ನು ಹುಡುಕುತ್ತಿರುವ ದೃಶ್ಯವನ್ನು ಸುದ್ದಿ ಸಂಸ್ಥೆಗಳು ಪ್ರಸಾರ ಮಾಡಿವೆ.
ಸೇನಾ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರು ರೈಲಿನಲ್ಲಿ ಇದ್ದರು ಎಂದು ಎಂದು ಅಧಿಕಾರಿ ಎಎಫ್‌ಪಿಗೆ ತಿಳಿಸಿದ್ದಾರೆ. ಮಂಗಳವಾರದಿಂದ ಪ್ರಾರಂಭವಾಗಲಿರುವ ಈದ್ ಹಬ್ಬವನ್ನು ಆಚರಿಸಲು ಈ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಘಟನೆಯ ನಂತರ ಕ್ವೆಟ್ಟಾ ಪ್ರದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಪೇಶಾವರಕ್ಕೆ ತೆರಳುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.



