ಬೆಂಗಳೂರು: ರಸಗೊಬ್ಬರ ಅಭಾವ ವಿಚಾರವನ್ನು ವಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಮಾಜಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧವೂ ಕಿಡಿಕಾರಿದರು.
ರಸಗೊಬ್ಬರ: ವಿಪಕ್ಷಗಳ ದ್ವಂದ್ವ ನಿಲುವಿಗೆ ಟಾಂಗ್
“ಕಳೆದ ಎರಡು ವರ್ಷಗಳಿಂದಲೇ ಸಾವಯವ ಗೊಬ್ಬರ ಬಳಕೆಗೆ ರಾಜ್ಯ ಸರ್ಕಾರ ಒತ್ತು ನೀಡಿತ್ತು. ಆಗ ಅದೇ ವಿಪಕ್ಷಗಳು ‘ಬರೀ ಸಾವಯವದಿಂದ ರೈತ ಬದುಕಲ್ಲ’ ಅಂತ ಟೀಕೆ ಮಾಡಿದವು. ಈಗ ಪ್ರಧಾನಿ ಮೋದಿಯವರೇ ಸಾವಯವ ಗೊಬ್ಬರ ಬಳಸಿ ಎಂದು ಹೇಳುತ್ತಿದ್ದಾರೆ. ಈಗ ಅಶೋಕ್, ವಿಜಯೇಂದ್ರ ಏನು ಹೇಳುತ್ತಾರೆ? ಕೇಂದ್ರವನ್ನು ಟೀಕೆ ಮಾಡುತ್ತಾರಾ ಅಥವಾ ಹೊಗಳುತ್ತಾರಾ ನೋಡಬೇಕು” ಎಂದು ಪ್ರಶ್ನಿಸಿದರು.
“ನಾನು ಕೃಷಿ ಸಚಿವನಾಗಿದ್ದಾಗಲೇ ಡಿಸಿ, ಸಿಇಒಗಳಿಗೆ ರೈತರಿಗೆ ಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದೆ. ಆ ಸೂಚನೆಗಳನ್ನು ಅಧಿಕಾರಿಗಳು ಈಗಲೂ ಪಾಲಿಸುತ್ತಿದ್ದಾರೆ. ಈಗ ಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡ ಅದೇ ಸೂಚನೆ ನೀಡಿದ್ದಾರೆ. ವಿಪಕ್ಷಗಳು ಇದನ್ನು ದೊಡ್ಡದಾಗಿ ಬಿಂಬಿಸಿ ರೈತರಲ್ಲಿ ಆತಂಕ ಸೃಷ್ಟಿಸಬಾರದು” ಎಂದು ಮನವಿ ಮಾಡಿದರು.
ಅಶೋಕ್, ಹೆಚ್ಡಿಕೆ ವಿರುದ್ಧ ವಾಗ್ದಾಳಿ
“ಅಶೋಕ್ ಅವರು ತಮ್ಮ ಸ್ಥಾನ ಉಳಿಸಿಕೊಳ್ಳಲು ದಿನಾ ಪ್ರದರ್ಶನ ಮಾಡುತ್ತಿದ್ದಾರೆ. ಹೊಸ ಸರ್ಕಾರ ಬಂದಾಗ 2-3 ತಿಂಗಳು ಹನಿಮೂನ್ ಪಿರಿಯಡ್ ಕೊಡುವ ಸಂಸ್ಕಾರ ಬೇಕು. ಕುಮಾರಸ್ವಾಮಿ, ಅಶೋಕ್ ಎಲ್ಲರೂ 5-6 ತಿಂಗಳು ಟೈಂ ಕೊಡ್ತೀವಿ ಎಂದು ಹೇಳಿದರೆ ಒಳ್ಳೆಯ ಭಾವನೆ ಬರುತ್ತದೆ” ಎಂದು ಹೇಳಿದರು.
“ಡಿಕೆಶಿ ಪದಗ್ರಹಣ ಮಾಡುವಾಗಿನಿಂದಲೇ ಅಶೋಕ್ ನಾಲಿಗೆ ಹರಿಬಿಡುತ್ತಿದ್ದಾರೆ. ಅಶೋಕ್ ತಮ್ಮ ಭಾಷೆ ಹಿಡಿತದಲ್ಲಿಟ್ಟು ಮಾತಾಡಿದರೆ ಒಳ್ಳೆಯದು. ನಿಮಗೆ ಮುಂದೆ ಅವಕಾಶ ಸಿಗುತ್ತೋ ಇಲ್ವೋ ಅದು ನಿಮ್ಮ ಪಕ್ಷದ ವಿಚಾರ” ಎಂದು ಟಾಂಗ್ ನೀಡಿದರು.
ಹೆಚ್ಡಿಕೆ ಅವರು “1400 ಕೋಟಿ ಡಿಕೆಶಿಗೆ ಎಲ್ಲಿಂದ ಉದುರಿತು” ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, “ಹೆಚ್‌ಡಿಡಿ ಅವರನ್ನು ಹೊರತುಪಡಿಸಿ ನಿಮ್ಮ ಆಸ್ತಿ ಘೋಷಣೆ ಮಾಡಲು ರೆಡಿ ಇದ್ದೀರಾ? ನಿಮ್ಮ ಕುಟುಂಬದಲ್ಲಿ ಎಷ್ಟು ಆಸ್ತಿ ಇದೆ, ಎಲ್ಲಿಂದ ಬಂತು ಎಂದು ಸ್ವಯಂ ತನಿಖೆಗೆ ಒಳಪಡಿಸಿಕೊಳ್ಳಿ. ನೀವು ಹೀಗೆ ಮುಂದುವರೆದರೆ ನಿಮ್ಮ ದಾಖಲೆಗಳು ಡಿಕೆಶಿ ಬಳಿಯೂ ಇವೆ. ಅವರು ಕೂಟ ರಾಜಕಾರಣದಲ್ಲಿ ಚಾಣಾಕ್ಯರು, ಸಮಯ ಬಂದಾಗ ದಾಖಲೆ ಬಿಡುತ್ತಾರೆ” ಎಂದು ಎಚ್ಚರಿಸಿದರು.
“ಭ್ರಷ್ಟಾಚಾರದ ಬಗ್ಗೆ ಹೆಚ್ಡಿಕೆ ಮಾತಾಡಬಾರದು” – ಪಂಥಾಹ್ವಾನ
ಅತ್ಯಂತ ಕಟುವಾಗಿ ಮಾತಾಡಿದ ಅವರು, “ಕುಮಾರಸ್ವಾಮಿ ಅವರು ಭ್ರಷ್ಟಾಚಾರದ ಬಗ್ಗೆ ಮಾತಾಡಬಾರದು. ನಾನು ಯಾವ ಭಾಷೆ ಬಳಸಬೇಕೋ ಗೊತ್ತಿಲ್ಲ. ಟಿಕೆಟ್ ಕೊಡೋಕೆ, ಇನ್ನೊಬ್ಬರನ್ನು ಸೋಲಿಸೋಕೆ ಎಷ್ಟು ಫಿಕ್ಸ್ ಮಾಡ್ತಿದ್ದರು ಎಲ್ಲಾ ಗೊತ್ತಿದೆ. ನಾನು ಕೂಡ ಅವರ ಜೊತೆಯಲ್ಲಿದ್ದವನು. ಭ್ರಷ್ಟಾಚಾರ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬನ್ನಿ. ನಾನೊಬ್ಬನೇ ಎಲ್ಲಿಗೆ ಬೇಕಾದರೂ ಬರ್ತೀನಿ, ನೀವು ಬನ್ನಿ” ಎಂದು ಪಂಥಾಹ್ವಾನ ನೀಡಿದರು.
“120 ಸ್ಥಾನ ಗೆಲ್ಲದಿದ್ದರೆ ಪಕ್ಷ ವಿಸರ್ಜನೆ ಮಾಡ್ತೀನಿ ಅಂದಿದ್ದಿರಿ, ವಿಸರ್ಜನೆ ಮಾಡಿದ್ರಾ?” ಎಂದು ಪ್ರಶ್ನಿಸಿದರು.
ಬಿಡದಿ ಟೌನ್‌ಶಿಪ್: ರೈತರ ವಿಶ್ವಾಸ ಮುಖ್ಯ
ಬಿಡದಿ ಟೌನ್‌ಶಿಪ್ ಯೋಜನೆಗೆ ರೈತರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಮಾತಾಡಿದ ಅವರು, “ನಾಲ್ಕು ದಿನ ತಡವಾದರೂ ಪರವಾಗಿಲ್ಲ. ರೈತರನ್ನು ವಿಶ್ವಾಸಕ್ಕೆ ಪಡೆಯಬೇಕು. ಮುಂದೆ ಈ ಯೋಜನೆಯನ್ನು ಮಂಡ್ಯ-ಮೈಸೂರು ವರೆಗೂ ಕೊಂಡೊಯ್ಯಬೇಕು. ನೋಟಿಫಿಕೇಶನ್ ಹೊರಡಿಸಿದ ತಕ್ಷಣ ಎಲ್ಲಾ ಆಗೋಯ್ತು ಅಂತಲ್ಲ. ಸಿಎಂ ಶಿವಕುಮಾರ್ ಅದೇ ಜಿಲ್ಲೆಯವರು, ರೈತರನ್ನು ವಿಶ್ವಾಸಕ್ಕೆ ಪಡೆದು ಯೋಜನೆ ಕೈಗೆತ್ತಿಕೊಳ್ಳುತ್ತಾರೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಚರ್ಚೆ ಮಾಡ್ತೀವಿ” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ,ಮೈಶುಗರ್ ಅಧ್ಯಕ್ಷ ಸಿ ಡಿ ಗಂಗಾಧರ್ ಇದ್ದರು



