ಬಲಿಷ್ಠ ಫ್ರಾನ್ಸ್ ಮತ್ತು ನೆದರ್ಲೆಂಡ್ಸ್ ತಂಡಗಳ ನಡುವಣ ಯುರೋ ಕಪ್ ಫುಟ್ಬಾಲ್ ಪಂದ್ಯ ಗೋಲು ರಹಿತ ಡ್ರಾದೊಂದಿಗೆ ಸಮಬಲದಲ್ಲಿ ಅಂತ್ಯಗೊಂಡಿದೆ.
ಶನಿವಾರ ಮುಂಜಾನೆ ನಡೆದ ಡಿ ಗುಂಪಿನ ಪಂದ್ಯದಲ್ಲಿ ಅಜೇಯ ತಂಡವಾಗಿ ಮುನ್ನುಗ್ಗುತ್ತಿದ್ದ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾಗುವ ಮೂಲಕ ಪಂದ್ಯ ಗೋಲು ರಹಿತವಾಗಿ ಡ್ರಾಗೊಂಡಿದೆ.
ಪಂದ್ಯದ ಕೊನೆಯ ಕ್ಷಣದಲ್ಲಿ ಕ್ಸೇವಿ ಸಿಮೊನ್ಸ್ ಫ್ರಾನ್ಸ್ ಪಾಳಯವನ್ನು ಭೇದಿಸಿ ಗೋಲು ದಾಖಲಿಸಿದರಾದರೂ ತಾಂತ್ರಿಕ ಕಾರಣ ನೀಡಿದ ರೆಫರಿ ಗೋಲು ನಿರಾಕರಿಸಿದರು. ಮತ್ತೊಬ್ಬ ಆಟಗಾರ ಡುಮ್ ಫ್ರಿಸ್ ಸಮೀಪದಲ್ಲಿ ಇದ್ದಿದ್ದರಿಂದ ರೆಫರಿ ಆಫ್ ಸೈಡ್ ಎಂದು ತೀರ್ಮಾನಿಸಿದರು.
ರೆಫರಿ ತೀರ್ಮಾನದಿಂದ ಅಸಮಾಧಾನಗೊಂಡ ನೆದರ್ಲೆಂಡ್ಸ್ ಆಟಗಾರರು ಮೈದಾನದಲ್ಲೇ ಪ್ರಶ್ನಿಸಿದರು. ನಂತರ ರೆಫರಿ ಹಾಗೂ ವಿಆರ್ ಎಸ್ ತಜ್ಞರ ಜೊತೆ ಚರ್ಚಿಸಿ ಗೋಲು ನಿರಾಕರಿಸುವ ತಮ್ಮ ತೀರ್ಮಾನಕ್ಕೆ ಬದ್ಧರಾದರು. ಇದರಿಂದ ನೆದರ್ಲೆಂಡ್ಸ್ ರೋಚಕ ಗೆಲುವಿನ ಅವಕಾಶವನ್ನು ಕಳೆದುಕೊಂಡಿತು.
ಇದಕ್ಕೂ ಮುನ್ನ ಫ್ರಾನ್ಸ್ ಆಸ್ಟ್ರೀಯಾ ವಿರುದ್ಧದ ಪಂದ್ಯದಲ್ಲಿ ಸ್ವ ಗೋಲಿನ ಲಾಭ ಪಡೆದು ಗೆಲುವು ದಾಖಲಿಸಿದ್ದರೆ, ನೆದರ್ಲೆಂರ್ಡ್ಸ್ 2-1ರಿಂದ ಪೋಲೆಂಡ್ ವಿರುದ್ಧ ಗೆಲುವು ದಾಖಲಿಸಿತ್ತು.