Wednesday, June 24, 2026
Google search engine
Homeರಾಜ್ಯಜುಲೈ 1ರಿಂದ ಮನ್ರೇಗಾ ಹೊಸರೂಪ ವಿಬಿಜಿ ರಾಮ್ ಜಿ ಜಾರಿ: ಸಚಿವ ಈಶ್ವರ ಖಂಡ್ರೆ

ಜುಲೈ 1ರಿಂದ ಮನ್ರೇಗಾ ಹೊಸರೂಪ ವಿಬಿಜಿ ರಾಮ್ ಜಿ ಜಾರಿ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಗ್ರಾಮೀಣ ಭಾಗದ ಕುಟುಂಬಗಳಿಗೆ ಉದ್ಯೋಗದ ಖಾತ್ರಿ ನೀಡಿದ್ದ ನರೇಗಾ ಹೊಸ ಸ್ವರೂಪ ವಿಕ್ಷಿತ ಭಾರತ್ ಜಿ ರಾಮ್ ಜಿಯಿಂದ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾದರೂ ಗ್ರಾಮೀಣ ಜನರ, ಮಹಿಳೆಯರ, ವಂಚಿತರ, ದುರ್ಬಲರ ಹಿತದೃಷ್ಟಿಯಿಂದ ಜುಲೈ 1ರಿಂದಲೇ ಜಾರಿಗೆ ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರ 90:10 ಅನುಪಾತದಲ್ಲಿ ವೇತನ ಭರಿಸುತ್ತಿತ್ತು. ರಾಜ್ಯ ಸರ್ಕಾರ ಕೇವಲ 10ರಷ್ಟು ಹಣ ನೀಡುತ್ತಿತ್ತು. ಆದರೆ, ಈಗ 60:40ರ ಅನುಪಾತದಲ್ಲಿ ವೆಚ್ಚ ಭರಿಸಬೇಕಾಗಿದ್ದು ರಾಜ್ಯಗಳ ಮೇಲೆ ಹೆಚ್ಚಿನ ಹೊರೆ ಆಗುತ್ತಿದೆ ಎಂದರು.

2006ರಿಂದ 2026ರಲ್ಲಿ ಇಲ್ಲಿಯವರೆಗೆ ಕೇಂದ್ರ ಸರ್ಕಾರ ನರೇಗಾ ಅಡಿಯಲ್ಲಿ 56492 ಕೋಟಿ ರೂ. ಭರಿಸಿದ್ದರೆ, ರಾಜ್ಯ ಸರ್ಕಾರ 4821 ಕೋಟಿ ಮಾತ್ರ ಭರಿಸಿ ಸುಮಾರು 182 ಕೋಟಿ ಮಾನವ ದಿನಗಳ ಉದ್ಯೋಗ ಒದಗಿಸಿತ್ತು. ಆದರೆ ಈಗ ಒಂದೇ ವರ್ಷಕ್ಕೆ 3806ಕೋಟಿ ರೂ. ವೆಚ್ಚ ಭರಿಸುವ ಸ್ಥಿತಿ ಬಂದಿದೆ. ಇದು ರಾಜ್ಯದ ಮೇಲೆ ಆಗುವ ದೊಡ್ಡ ಹೊರೆ ಎಂದು ತಿಳಿಸಿದರು.

ಸಂಸತ್ತಿನಲ್ಲಿ ವಿಬಿಜಿ ರಾಮ್ ಜಿ ಕಾಯಿದೆ ತರುವ ಮುನ್ನ ಕೇಂದ್ರ ಸರ್ಕಾರ ರಾಜ್ಯಗಳ ಸಲಹೆ ಪಡೆಯಬೇಕಾಗಿತ್ತು. ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳನ್ನು ಬಿಟ್ಟು ಕಾಯಿದೆ ರೂಪಿಸಿದ ಬಗ್ಗೆಯೂ ಕರ್ನಾಟಕ ರಾಜ್ಯ ಸರ್ಕಾರದ ವಿರೋಧವಿದೆ. ಇದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲಾಗುತ್ತಿದೆ. ಜೊತೆಗೆ ಕೇಂದ್ರ ಸರ್ಕಾರ ಹಂತ ಹಂತವಾಗಿ ಕನಿಷ್ಠ 80:20ರ ಅನುಪಾತದಲ್ಲಾದರೂ ರಾಜ್ಯಗಳ ನೆರವಿಗೆ ನಿಲ್ಲಬೇಕು ಎಂದು ಆಗ್ರಹಿಸಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರ ವಿಬಿಜಿ ರಾಮ್ ಜಿ ಅಡಿ ರಾಜ್ಯಕ್ಕೆ 5709 ಕೋಟಿ ರೂ. ಹಂಚಿಕೆ ಮಾಡಿದೆ. ಗ್ರಾಮೀಣ ಜನರಿಗೆ ತೊಂದರೆ ಆಗದಂತೆ ಯೋಜನೆಗೆ ರಾಜ್ಯ ಸರ್ಕಾರದ ವತಿಯಿಂದ 3806 ಕೋಟಿ ರೂ. ಭರಿಸಬೇಕಾಗುತ್ತದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು, ಅವರು ಸಮ್ಮತಿಸಿದ್ದಾರೆ ಎಂದರು.

ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ಬೇಸಾಯದ ಸಮಯದಲ್ಲಿ 60 ದಿನಗಳ ಕಾಲ ಉದ್ಯೋಗ ನೀಡದಿರುವಂತೆ ಸೂಚಿಸಿದೆ. ಇದು ಗ್ರಾಮೀಣ ಕುಟುಂಬಗಳಿಗೆ ಮಾರಕವಾಗಿದೆ. ಕಾರಣ ಈಗ ಅತ್ಯಾಧುನಿಕ ಕೃಷಿ ಯಂತ್ರೋಪಕರಣ ಬಂದಿದ್ದು, ಗ್ರಾಮೀಣ ಕುಟುಂಬಗಳಿಗೆ ಬೇಸಾಯದ ಸಮಯದಲ್ಲೂ ಕೃಷಿ ಉದ್ಯೋಗ ಲಭಿಸುವುದಿಲ್ಲ. ಹೀಗಾಗಿ ವಿಬಿಜಿ ರಾಮ್ ಜಿ ಅವರ ಅನ್ನವನ್ನು ಕಸಿಸಿಕೊಂಡಂತೆ ಮಾಡಿದೆ. ಇದರ ವಿರುದ್ಧ ರಾಜ್ಯ ಸರ್ಕಾರ ಆಕ್ಷೇಪಣೆ ವ್ಯಕ್ತಪಡಿಸಿದೆ ಎಂದರು.

ಬರುವ 28ರಂದು ದೆಹಲಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರೊಂದಿಗೆ ಎಲ್ಲ ರಾಜ್ಯಗಳ ಸಚಿವರ ಸಭೆ ಇದ್ದು, ಈ ಸಭೆಯಲ್ಲಿ ಈ ಎಲ್ಲ ಅಂಶಗಳ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.

ಬೇಡಿಕೆ ಆಧಾರದಲ್ಲಿ ಉದ್ಯೋಗ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ನಮ್ಮ ರಾಜ್ಯದಲ್ಲಿ 375 ರೂ. ಕೂಲಿ ಇದೆ. ರಾಜ್ಯ ಸರ್ಕಾರ ಕನಿಷ್ಠ ವೇತನವನ್ನು ಹೆಚ್ಚಳ ಮಾಡಿದೆ. ಇದಕ್ಕೆ ಹೊಂದುವಂತೆ ಕೇಂದ್ರವೂ ಕನಿಷ್ಠ ಕೂಲಿ ಹೆಚ್ಚಿಸಬೇಕು ಎಂದು ಈಶ್ವರ ಖಂಡ್ರೆ ಒತ್ತಾಯಿಸಿದರು.

ಜುಲೈ 1ರಿಂದ ಹೊಸ ಸ್ವರೂಪದ ಮನ್ರೇಗಾ (ವಿಬಿಜಿ ರಾಮ್ ಜಿ) ಜಾರಿ ಮಾಡಲಾಗುವುದು. ಇದರಡಿಯಲ್ಲಿ ಯಾರೇ ಉದ್ಯೋಗ ಕೇಳಿ ಬಂದರೂ ಅರ್ಹರಿಗೆ ಉದ್ಯೋಗ ನೀಡಲು ಸರ್ಕಾರ ಸನ್ನದ್ಧವಾಗಿದೆ ಎಂದರು.

ಕಳೆದ 3 ತಿಂಗಳಲ್ಲಿ ರಾಜ್ಯದಲ್ಲಿ 1.40 ಲಕ್ಷ ಮಾನವ ದಿನ ಸೃಷ್ಟಿಸಲಾಗಿದೆ. 9 ಕೋಟಿ ವಾರ್ಷಿಕ ಗುರಿ ಇಟ್ಟುಕೊಂಡಿದೆ. ಪ್ರತಿ ತಿಂಗಳೂ 80 ರಿಂದ 90 ಲಕ್ಷ ಮಾನವ ದಿನ ಸೃಷ್ಟಿ ನಮ್ಮ ಗುರಿಯಾಗಿದೆ ಎಂದರು.

ಈಗಾಗಲೇ ನರೇಗಾ ಅಡಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 7000ಕ್ಕೂ ಹೆಚ್ಚು ಸಿಬ್ಬಂದಿಯ ಜೀವನೋಪಾಯಕ್ಕೆ ತೊಂದರೆ ಆಗದ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments