ಭಾರೀ ವಿವಾದದ ನಂತರ ನಡೆದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ ಟಿಎ) ನಡೆಸಿದ ನೀಟ್ ಯುಜಿ ಮರು ಪರೀಕ್ಷೆಯ ಫಲಿತಾಂಶ ಗುರುವಾರ ರಾತ್ರಿ ಪ್ರಕಟಿಸಲಾಗಿದ್ದು, 11.21 ಲಕ್ಷ ಅಭ್ಯರ್ಥಿಗಳು ಅರ್ಹತೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೆಡಿಕಲ್, ಆಯುರ್ವೆದಿಕ್, ಡೆಂಟಲ್ ಮುಂತಾದ ವೈದ್ಯಕೀಯ ವಿಭಾಗದ ಅಂಡರ್ ಗ್ರ್ಯಾಚ್ಯುಯೆಟ್ ಗೆ ಅರ್ಹತೆ ಗಿಟ್ಟಿಸಿದ್ದು, ಪರೀಕ್ಷೆಯಲ್ಲಿ ಗರಿಷ್ಠ ಅಂಕ 720 ನಿಗದಿಯಾಗಿದ್ದು, 138 ಅಭ್ಯರ್ಥಿಗಳು 690ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ನಿಗದಿತ ಅವಧಿಯಲ್ಲಿ ಆರಂಭವಾಗುವ ಕೌನ್ಸಿಲಿಂಗ್ ಮತ್ತು ನೇಮಕಾತಿ ಪ್ರಕ್ರಿಯೆಗೆ ತಡವಾಗಬಾರದು ಎಂಬ ಕಾರಣಕ್ಕೆ ಫಲಿತಾಂಶವನ್ನು ಆದಷ್ಟು ಬೇಗನೇ ಪ್ರಕಟಿಸಲಾಗಿದೆ.
ಜೂನ್ 21ರಂದು ನಡೆದ ನೀಟ್ ಯುಜಿ2026 ಮರು ಪರೀಕ್ಷೆಗೆ 20 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. 4 ವಿದೇಶಿ ಹಾಗೂ 551 ಭಾರತದ ನಗರಗಳಲ್ಲಿ ಒಟ್ಟಾರೆ 5440 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಉತ್ತೀರ್ಣರಾದ ಅಭ್ಯರ್ಥಿಗಳ ಪೈಕಿ ಶೇ.56ರಷ್ಟು ಪಾಸಾಗುವ ಮೂಲಕ ಮಹಿಳೆಯರು ಮೈಲುಗೈ ಸಾಧಿಸಿದ್ದಾರೆ. ಪುರುಷರು ಶೇ.55.1 ಉತ್ತೀರ್ಣರಾಗಿದ್ದಾರೆ.
ಗರಿಷ್ಠ 720 ಅಂಕಗಳ ಪೈಕಿ 138 ಅಭ್ಯರ್ಥಿಗಳು 690ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ಇದರಲ್ಲಿ ಶೇ.93ರಷ್ಟು ವಿದ್ಯಾರ್ಥಿಗಳು ಮೊದಲ ಬಾರಿ ಪರೀಕ್ಷೆ ಬರೆದವರಾಗಿದ್ದಾರೆ. ಶೇ.99ರಷ್ಟು 17ರಿಂದ 19 ವಯೋಮಾನದವರಾಗಿದ್ದಾರೆ. 19 ಅಭ್ಯರ್ಥಿಗಳು 700ಕ್ಕಿಂತ ಅಧಿಕ ಗಳಿಸಿದ್ದಾರೆ. 1492 ಅಭ್ಯರ್ಥಿಗಳು 650ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ ಎಂದು ಎನ್ ಟಿಎ ಹೇಳಿದೆ.
ಉತ್ತರ ಪ್ರದೇಶದ 1.7 ಲಕ್ಷ ವಿದ್ಯಾರ್ಥಿಗಳು ಪಾಸಾಗುವ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ.



