ಬೆಂಗಳೂರು: ಖ್ಯಾತ ಲ್ಯಾಂಡ್ ಸ್ಕೇಪ್ ಡಿಸೈನರ್ ಸೂರಜ್ ನಾಯಕ್ ನೇತೃತ್ವದ ಎಕೋಸ್ಕೇಪ್ಸ್ ಲ್ಯಾಂಡ್ ಸ್ಕೇಪಿಂಗ್ ಸಂಸ್ಥೆ ಒಣಗುತ್ತಿರುವ ಕೆರೆಗಳು, ನಿರಂತರವಾಗಿ ಏರುತ್ತಿರುವ ತಾಪಮಾನ ಹಾಗೂ ತೀವ್ರವಾಗಿ ಕ್ಷೀಣಿಸುತ್ತಿರುವ ನಗರದ ಜೈವಿಕ ವೈವಿಧ್ಯತೆ ಸೇರಿದಂತೆ ಸಿಲಿಕಾನ್ ಸಿಟಿ ಬೆಂಗಳೂರು ಎದುರಿಸುತ್ತಿರುವ ಸಾಲು ಸಾಲು ನಾಗರಿಕ ಸವಾಲುಗಳನ್ನು ಸಮರ್ಥ ಲ್ಯಾಂಡ್ ಸ್ಕೇಪ್ ವಿನ್ಯಾಸದ ಮೂಲಕ ಹೇಗೆ ಎದುರಿಸಬಹುದು ಎಂಬ ಕುರಿತು ಮಾಧ್ಯಮದ ಜೊತೆ ಪರಿಕಲ್ಪನೆ ಹಂಚಿಕೊಂಡಿದ್ದಾರೆ.
ವಸತಿ ಸಮುಚ್ಚಯಗಳು, ಕಾರ್ಪೊರೇಟ್ ವಲಯ ಮತ್ತು ಪ್ರಮುಖ ಸಾಂಸ್ಥಿಕ ಯೋಜನೆಗಳಲ್ಲಿ ಒಂದು ದಶಕಕ್ಕೂ ಹೆಚ್ಚಿನ ಸುದೀರ್ಘ ಅನುಭವ ಹೊಂದಿರುವ ಎಕೋಸ್ಕೇಪ್ಸ್ ಸಂಸ್ಥೆಯು, ಈ ಸಂವಾದದಲ್ಲಿ ಪರಿಸರಸ್ನೇಹಿ ಹಾಗೂ ಸುಸ್ಥಿರ ನಗರಾಭಿವೃದ್ಧಿಗೆ ಪೂರಕವಾದ ತನ್ನ ವಿನ್ಯಾಸದ ತತ್ವಗಳನ್ನು ಪ್ರಸ್ತುತಪಡಿಸಿತು.
ಬೆಂಗಳೂರಿನ ಹವಾಮಾನ ವೈಪರೀತ್ಯವನ್ನು ತಡೆಯಲು ಇಡೀ ರಿಯಲ್ ಎಸ್ಟೇಟ್ ಉದ್ಯಮ ಮತ್ತು ನಗರದ ಯೋಜಕರು ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಹೆಜ್ಜೆ ಇಡಬೇಕು ಎಂಬ ಮಹತ್ವದ ದೃಷ್ಟಿಕೋನವನ್ನು ಸಂಸ್ಥೆಯು ಈ ಸಂದರ್ಭದಲ್ಲಿ ಹಂಚಿಕೊಂಡಿತು.
ಒತ್ತುವರಿ, ಮಾಲಿನ್ಯ ಮತ್ತು ಅಂತರ್ಜಲ ಮರುಪೂರಣದ ಕೊರತೆಯಿಂದಾಗಿ ಬೆಂಗಳೂರಿನ ಕೆರೆಗಳು ದಶಕಗಳಿಂದ ಗಣನೀಯವಾಗಿ ಕ್ಷೀಣಿಸುತ್ತಿದ್ದು, ಪ್ರತಿ ಬೇಸಿಗೆಯಲ್ಲೂ ತೀವ್ರ ನೀರಿನ ಬಿಕ್ಕಟ್ಟು ತಲೆದೂರುತ್ತಿದೆ. ಸೂಕ್ತ ಲ್ಯಾಂಡ್ ಸ್ಕೇಪ್ ಆಯ್ಕೆಗಳು, ಮಳೆನೀರು ಕೊಯ್ಲು ವಿಧಾನ, ನೀರು ಇಂಗುವ ಮೇಲ್ಮೈಗಳು ಮತ್ತು ಸ್ಥಳೀಯ ಸಸ್ಯ ಪ್ರಭೇದಗಳನ್ನು ಬೆಳೆಸುವ ಮೂಲಕ ಅಂತರ್ಜಲ ಹಾಗೂ ಮಹಾನಗರ ಪಾಲಿಕೆಯ ನೀರಿನ ಮೇಲಿನ ಅವಲಂಬನೆಯನ್ನು ಹೇಗೆ ತಗ್ಗಿಸಬಹುದು ಎಂಬುದನ್ನು ಎಕೋಸ್ಕೇಪ್ಸ್ ಈ ವೇಳೆ ಚರ್ಚಿಸಿತು.
ಭಾರತೀಯ ತೋಟಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ಸಾಂಪ್ರದಾಯಿಕ ಹುಲ್ಲುಹಾಸುಗಳ ಶೈಲಿಯಿಂದ ಹೊರಬರಬೇಕಾದ ಅಗತ್ಯವನ್ನು ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು. ಇಂತಹ ಹುಲ್ಲುಹಾಸುಗಳಿಗೆ ಅತಿಯಾದ ನೀರು ಬೇಕಾಗುತ್ತದೆ ಹಾಗೂ ನಿಯಮಿತವಾಗಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸಬೇಕಾಗುತ್ತದೆ. ಏಕಬೆಳೆ ಪದ್ಧತಿಯ ಈ ಹುಲ್ಲುಹಾಸುಗಳು ಜೀವವೈವಿಧ್ಯತೆಗೆ ಪೂರಕವಾಗಿಲ್ಲ ಮತ್ತು ಇವುಗಳ ಬೇರುಗಳು ಮೇಲ್ಮಟ್ಟದಲ್ಲಿ ಇರುವುದರಿಂದ ಸ್ಥಳೀಯ ಸಸ್ಯಗಳಿಗೆ ಹೋಲಿಸಿದರೆ ಮಳೆನೀರನ್ನು ಇಂಗಿಸಿಕೊಳ್ಳುವ ಸಾಮರ್ಥ್ಯ ಕಡಿಮೆ ಹೊಂದಿರುತ್ತವೆ. ಹೀಗಾಗಿ ಕಡಿಮೆ ನಿರ್ವಹಣೆ ಬೇಡುವ, ರಾಸಾಯನಿಕ ಮುಕ್ತ ಮತ್ತು ಪರಿಸರಕ್ಕೆ ಪೂರಕವಾದ ಪರ್ಯಾಯ ವಿನ್ಯಾಸಗಳತ್ತ ಗ್ರಾಹಕರನ್ನು ಸೆಳೆಯಲು ಎಕೋಸ್ಕೇಪ್ಸ್ ಶ್ರಮಿಸುತ್ತಿದೆ.
ಅಲಂಕಾರಿಕ ಅಥವಾ ಆಮದು ಮಾಡಿಕೊಂಡ ಸಸ್ಯಗಳಿಗಿಂತ ಸ್ಥಳೀಯ ಸಸ್ಯ ಪ್ರಭೇದಗಳನ್ನು ನಿರಂತರವಾಗಿ ಬಳಸುವುದು ಕಂಪನಿಯ ಪ್ರಮುಖ ತತ್ವವಾಗಿದೆ. ಸ್ಥಳೀಯ ಸಸ್ಯಗಳು ಇಲ್ಲಿನ ಮಳೆ ಮತ್ತು ಹವಾಮಾನಕ್ಕೆ ಹೊಂದಿಕೊಳ್ಳುವುದರಿಂದ ಅವುಗಳಿಗೆ ಕಡಿಮೆ ನೀರು ಮತ್ತು ರಾಸಾಯನಿಕಗಳ ಅಗತ್ಯವಿರುತ್ತದೆ. ಜೊತೆಗೆ ಇವು ಸ್ಥಳೀಯ ಹಕ್ಕಿಗಳು ಮತ್ತು ಪರಾಗಸ್ಪರ್ಶಕ ಕೀಟಗಳಿಗೆ ಆಸರೆಯಾಗುತ್ತವೆ ಹಾಗೂ ದೀರ್ಘಾವಧಿಯಲ್ಲಿ ಇವುಗಳ ನಿರ್ವಹಣಾ ವೆಚ್ಚವೂ ಕಡಿಮೆ. ಎಕೋಸ್ಕೇಪ್ಸ್‌ನ ಎಲ್ಲಾ ಯೋಜನೆಗಳಲ್ಲೂ ಈ ತತ್ವ ಎದ್ದು ಕಾಣುತ್ತದೆ.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ತಾಪಮಾನವನ್ನು ನಿಯಂತ್ರಿಸಲು ವಸತಿ ಸಮುಚ್ಚಯಗಳು ಮತ್ತು ಕಾರ್ಪೊರೇಟ್ ಕ್ಯಾಂಪಸ್ ಗಳಲ್ಲಿ ಕಿರು ಅರಣ್ಯ ಮತ್ತು ಹಸಿರು ಹೊದಿಕೆಯನ್ನು ನಿರ್ಮಿಸುವ ತನ್ನ ಕಾಮಗಾರಿಗಳ ಕುರಿತು ಎಕೋಸ್ಕೇಪ್ಸ್ ವಿವರಿಸಿತು. ಹಕ್ಕಿಗಳು, ಚಿಟ್ಟೆಗಳು ಮತ್ತು ಜೇನುನೊಣಗಳನ್ನು ಮರಳಿ ಆಕರ್ಷಿಸುವ ಮೂಲಕ ಬೆಂಗಳೂರಿನ ಉದ್ಯಾನ ನಗರಿ ಎಂಬ ಕಳೆದುಹೋಗುತ್ತಿರುವ ಹೆಮ್ಮೆಯ ಗುರುತನ್ನು ಮರುಸ್ಥಾಪಿಸಲು ಸಂಸ್ಥೆಯು ಶ್ರಮಿಸುತ್ತಿದೆ.
ಉದ್ದಿಮೆಯ ವ್ಯವಹಾರದ ಕುರಿತು ಮಾತನಾಡಿದ ಸಂಸ್ಥೆಯು, ದೊಡ್ಡಬಳ್ಳಾಪುರ, ತುಮಕೂರು ಮತ್ತು ಮೈಸೂರು ಸೇರಿದಂತೆ ವಿವಿಧ ಪ್ರದೇಶಗಳ ಸ್ಥಳೀಯ ನರ್ಸರಿಗಳು ಹಾಗೂ ರೈತರಿಂದಲೇ ನೇರವಾಗಿ ಸಸ್ಯ ಮತ್ತು ಅಗತ್ಯ ಸಾಮಗ್ರಿಗಳನ್ನು ಖರೀದಿಸುತ್ತಿರುವುದಾಗಿ ತಿಳಿಸಿತು. ಅಲ್ಲದೆ, ಅಸಂಘಟಿತವಾಗಿರುವ ಈ ಲ್ಯಾಂಡ್ ಸ್ಕೇಪಿಂಗ್ ಕ್ಷೇತ್ರವನ್ನು ಸಂಘಟಿತ ರಂಗವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸ್ಥಳೀಯ ಯುವಕರಿಗೆ ಮತ್ತು ತೋಟಗಾರರಿಗೆ ಆಧುನಿಕ, ವೈಜ್ಞಾನಿಕ ತಂತ್ರಜ್ಞಾನಗಳ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿತು.
ಸಂವಾದದಲ್ಲಿ ಮಾತನಾಡಿದ ಎಕೋಸ್ಕೇಪ್ಸ್ ಲ್ಯಾಂಡ್ ಸ್ಕೇಪಿಂಗ್ ಸಂಸ್ಥೆಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಸೂರಜ್ ನಾಯಕ್, “ಬೆಂಗಳೂರಿನ ಕೆರೆಗಳು ಒಣಗುತ್ತಿವೆ, ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಆದರೂ ನಗರದ ಬಹುತೇಕ ತೋಟಗಳನ್ನು ಇಂದಿಗೂ ಐವತ್ತು ವರ್ಷಗಳ ಹಳೆಯ ಶೈಲಿಯಲ್ಲೇ ವಿನ್ಯಾಸಗೊಳಿಸಲಾಗುತ್ತಿದೆ. ಇಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳದ, ಅತಿ ಹೆಚ್ಚು ನೀರು ಬೇಡುವ ಹುಲ್ಲುಹಾಸುಗಳು ಮತ್ತು ಅಲಂಕಾರಿಕ ಗಿಡಗಳನ್ನು ಬೆಳೆಸಲಾಗುತ್ತಿದೆ. ಆದರೆ ಎಕೋಸ್ಕೇಪ್ಸ್ ನಲ್ಲಿ ನಾವು ಸಂಪೂರ್ಣವಾಗಿ ಸ್ಥಳೀಯ ಸಸ್ಯಗಳನ್ನು ಬಳಸಲು ನಿರ್ಧರಿಸಿದ್ದೇವೆ. ಲ್ಯಾಂಡ್ ಸ್ಕೇಪಿಂಗ್ ಎನ್ನುವುದು ಕಟ್ಟಡ ಮುಗಿದ ನಂತರ ಮಾಡುವ ಕೇವಲ ಅಲಂಕಾರಿಕ ಕೆಲಸವಲ್ಲ; ಇದನ್ನು ಒಳಚರಂಡಿ ಅಥವಾ ವಿದ್ಯುತ್ ವ್ಯವಸ್ಥೆಯಷ್ಟೇ ಪ್ರಮುಖವಾದ ಮೂಲಸೌಕರ್ಯ ಎಂದು ಪರಿಗಣಿಸಬೇಕು ಎಂದರು.



