ಬೆಂಗಳೂರು: ಮಾನಸಿಕ ಅಸ್ವಸ್ಥದಿಂದ ಆತ್ಮಹತ್ಯೆಗೆ ಒಳಗಾಗುವವರ ದರದಲ್ಲಿ ಬೆಂಗಳೂರು ದೇಶದ ಯಾವುದೇ ನಗರಕ್ಕಿಂತ ಅತಿ ಹೆಚ್ಚಿನ ದರ ಮತ್ತು ಅತಿ ವೇಗದ ಚಾಲನೆಯಿಂದ ಸಂಭವಿಸುವ ರಸ್ತೆ ಅಪಘಾತ ಸಾವುಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಹೃದಯಾಘಾತದಿಂದ ಉಂಟಾಗುವ ಹಠಾತ್ ಸಾವಿನ ಸಂಖ್ಯೆ ಸುಮಾರು ಶೇ. 25 ಹೆಚ್ಚಾಗಿದ್ದು, ರಸ್ತೆ ಅಪಘಾತದಲ್ಲಿ 12,399 ಜನರು ಸಾವನ್ನಪ್ಪಿದ್ದಾರೆ. ರಾಜ್ಯಾದ್ಯಂತ 2024ರ ವರದಿಯಲ್ಲಿ ವರ್ಷದಲ್ಲಿ 13,151 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗೃಹ ವ್ಯವಹಾರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ), ‘ಅಪಘಾತ ಸಾವುಗಳು ಮತ್ತು ಆತ್ಮಹತ್ಯೆ’ ಅಂಕಿಅಂಶಗಳ 2024 ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಈ ವರದಿಯಲ್ಲಿ ಈ ಅಂಶಗಳು ಬಹಿರಂಗಗೊಂಡಿವೆ.
ಆತ್ಮಹತ್ಯೆಯಲ್ಲಿ ಏರಿಳಿತ:
ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಪ್ರಕರಣದಲ್ಲಿ ಸ್ವಲ್ಪ ಏರಿಳಿತಗಳನ್ನು ತೋರಿಸುತ್ತದೆ. ಆದರೆ ಒಟ್ಟಾರೆಯಾಗಿ ಸ್ಥಿರವಾಗಿದೆ. ನಂತರ ತಮಿಳುನಾಡಿನಲ್ಲಿ 19,965, ಮಧ್ಯಪ್ರದೇಶದಲ್ಲಿ 15,491, ಕರ್ನಾಟಕದಲ್ಲಿ 13,151 ಮತ್ತು ಪಶ್ಚಿಮ ಬಂಗಾಳದಲ್ಲಿ 12,931 ಆತ್ಮಹತ್ಯೆಗಳು ವರದಿಯಾಗಿದೆ.
2022 ಮತ್ತು 2024ರ ನಡುವೆ ಕರ್ನಾಟಕದಲ್ಲಿ ಹೃದಯಾಘಾತದಿಂದ ಹಠಾತ್ ಸಾವಿನ ಸಂಖ್ಯೆ ಸುಮಾರು ಶೇ. 25ರಷ್ಟು ಹೆಚ್ಚಾಗಿದೆ. ಕಳೆದ ಕೆಲವು ವರ್ಷದಲ್ಲಿ ಹಠಾತ್ ಹೃದಯಾಘಾತದ ಅನೇಕ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು, ಜನರು ಹಠಾತ್ತನೆ ಕುಸಿದು ಬೀಳುವ ವಿಡಿಯೋಗಳು ವೈರಲ್ ಆಗಿದ್ದು, ಜನರಲ್ಲಿ ಭಯವನ್ನುಂಟುಮಾಡುತ್ತಿವೆ.
ಆತ್ಮಹತ್ಯೆ ಪ್ರಮಾಣ:
ಬೆಂಗಳೂರಿನಲ್ಲಿ ಆತ್ಮಹತ್ಯೆ ಪ್ರಕರಣಗಳು 2023ಕ್ಕೆ ಹೋಲಿಕೆ ಮಾಡಿದಲ್ಲಿ 1.4ರಷ್ಟು ಹೆಚ್ಚಾಗಿವೆ. ನಗರದಲ್ಲಿನ ಆತ್ಮಹತ್ಯೆಗಳಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳು, ಕೌಟುಂಬಿಕ ಸಂಘರ್ಷಗಳು, ಆರ್ಥಿಕ ಒತ್ತಡ, ಕೆಲಸದ ಸ್ಥಳದಲ್ಲಿನ ಒತ್ತಡ, ಒಂಟಿತನ, ಶೈಕ್ಷಣಿಕ ಒತ್ತಡ ಕಾರಣವಾಗಿದೆ. ಇತರೆ ದೇಶದ ನಗರಗಳಿಗೆ ಹೋಲಿಕೆ ಮಾಡಿದಾಗ ಬೆಂಗಳೂರಿನಲ್ಲಿ 2022ರಲ್ಲಿ 2,313 ಕ್ಕೂ ಹೆಚ್ಚು, 2023 ರಲ್ಲಿ 2,370 ಮತ್ತು 2024ರಲ್ಲಿ 2,430 ಆತ್ಮಹತ್ಯೆ ದಾಖಲಾಗಿದೆ.
ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣ 2022ರಲ್ಲಿ ಏರಿಕೆ ಕಂಡಿದ್ದು, ಅನಂತರದ ವರ್ಷಗಳಲ್ಲಿ ಇಳಿಕೆ ಕಂಡಿದೆ. ಒಟ್ಟಾರೆಯಾಗಿ, ಕರ್ನಾಟಕದ ಆತ್ಮಹತ್ಯೆ ದರವು ಸ್ಥಿರವಾಗಿ ಹೆಚ್ಚಾಗುತ್ತಿದೆ.
ಕೃಷಿಕರ ಆತ್ಮಹತ್ಯೆ ದರ:
2024 ರಲ್ಲಿ ಕರ್ನಾಟಕದಲ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ ರೈತರ ಸಂಖ್ಯೆ 2023ರಲ್ಲಿ 1,425 ರಿಂದ 2024ಕ್ಕೆ 1,770 ಏರಿಕೆ ಕಂಡಿದೆ. ಕರ್ನಾಟಕದಲ್ಲಿ 2,811 ಪುರುಷರು ಮತ್ತು 160 ಮಹಿಳೆಯರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಒಟ್ಟು ಆತ್ಮಹತ್ಯೆಗಳ ಸಂಖ್ಯೆ ಸ್ಥಿರವಾಗಿ ಏರಿದೆ.
2024ರಲ್ಲಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಒಟ್ಟು 10,546 ಜನರು (4,633 ರೈತರು ಮತ್ತು 5,913 ಕೃಷಿ ಕಾರ್ಮಿಕರು ಸೇರಿದಂತೆ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ದೇಶದದಲ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಕೃಷಿಕರ ಪ್ರಮಾಣ ಶೇ 6.2ರಷ್ಟಿದೆ ಎಂದು ವರದಿಯಲ್ಲಿ ಹೇಳಿದೆ.
ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಮುಖ್ಯವಾಗಿ ಹತ್ತಿ ಮತ್ತು ಕಬ್ಬಿನಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಪ್ರದೇಶದಲ್ಲಿ ಈ ಪ್ರಕರಣಗಳು ವರದಿಯಾಗಿವೆ. 2023ರ ವರದಿ ಹೋಲಿಸಿದರೆ 2024ರಲ್ಲಿ ಅಂತಹ ಆತ್ಮಹತ್ಯೆಗಳ ಸಂಖ್ಯೆ 2ಕ್ಕಿಂತ ಹೆಚ್ಚು ಕಡಿಮೆಯಾಗಿದೆ.
ಅಪಘಾತ ಎರಡನೇ ಸ್ಥಾನ:
ಅತಿ ವೇಗದ ಚಾಲನೆಯಿಂದ ಸಂಭವಿಸುವ ರಸ್ತೆ ಅಪಘಾತದ ಸಾವುಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, 10,614 ಸಾವುಗಳು ಸಂಭವಿಸಿವೆ. ತಮಿಳುನಾಡು 13,765 ಸಾವುಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದರಲ್ಲಿ ಕರ್ನಾಟಕವು ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಕ್ಕಿಂತ ಹಿಂದಿದೆ.
ಬೆಂಗಳೂರಿನಲ್ಲಿನ ಅಪಘಾತದಲ್ಲಿ 2024ರಲ್ಲಿ 894 ಸಾವಾಗಿದ್ದು, 4,022 ಗಾಯಗಳು, ಇದು ಭಾರತದ ಪ್ರಮುಖ ನಗರಗಳಲ್ಲಿನ ಎಲ್ಲಾ ರಸ್ತೆ ಅಪಘಾತ ಸಾವುಗಳಲ್ಲಿ 5.6% ರಷ್ಟಿದೆ. ದೆಹಲಿ 2,181 ಸಾವುಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಜೈಪುರ 1,001 ಸಾವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಇತರೆ ಅಪಘಾತದ ಸಾವು:
ರಾಜ್ಯದಲ್ಲಿ ಅಗ್ನಿ ಅನಾಹುತ, ಜಿಗಿತ, ನೀರಲ್ಲಿ ಮುಳುಗುವುದು ರೀತಿಯ ಅಪಘಾತ ಪ್ರಕರಣಗಳಲ್ಲಿ 2024ರಲ್ಲಿ 31,034 ಪ್ರಕರಣ ದಾಖಲಾಗಿವೆ.
2024ರಲ್ಲಿ ನಗರಗಳಲ್ಲಿ ಒಟ್ಟು 69,378 ಅಪಘಾತ ಸಾವುಗಳು ವರದಿಯಾಗಿವೆ. ಒಟ್ಟು ಸಾವುಗಳಲ್ಲಿ ಶೇ. 12.5 ರಷ್ಟಿರುವ ಮುಂಬೈನಲ್ಲಿ ಗರಿಷ್ಠ ಸಂಖ್ಯೆಯ ಅಪಘಾತ ಸಾವುಗಳು (8,655 ಸಾವುಗಳು) ವರದಿಯಾಗಿವೆ. ನಂತರ ಪುಣೆ (5,412), ಬೆಂಗಳೂರು (4,597), ದೆಹಲಿ ನಗರ (3,722), ಜೈಪುರ (2,959) ಮತ್ತು ಸೂರತ್ (2,491) ಇದೆ.
ತಮಿಳುನಾಡು ನಂಬರ್ ಒನ್
ರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿರುವ ರಾಜ್ಯಗಳ ಪೈಕಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದು, 67,296 ಪ್ರಕರಣಗಳು ದಾಖಲಾಗಿವೆ. ಮಧ್ಯಪ್ರದೇಶದಲ್ಲಿ – 55,771, ಕೇರಳದಲ್ಲಿ – 46,591, ಕರ್ನಾಟಕದಲ್ಲಿ-43,062, ಉತ್ತರ ಪ್ರದೇಶದಲ್ಲಿ – 38,417 ಮತ್ತು ಮಹಾರಾಷ್ಟ್ರದಲ್ಲಿ -36,051 ಅಪಘಾತಗಳು ಸಂಭವಿಸಿವೆ.
ರಾಜ್ಯದಲ್ಲಿ ಟ್ರಾಫಿಕ್ ಸಂಬಂಧಿತ ಅಪಘಾತ ಸಾವುಗಳಿಗೆ ಸಂಚಾರ ಅಪಘಾತಗಳು ಗಮನಾರ್ಹವಾಗಿ ಹೆಚ್ಚಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಎಲ್ಲಾ ರಸ್ತೆ ಅಪಘಾತ ಸಾವುಗಳಲ್ಲಿ ಕರ್ನಾಟಕದ ಪ್ರಮಾಣ ಶೇ. 6.8 ರಷ್ಟಿದೆ.



