Sunday, June 28, 2026
Google search engine
Homeಬೆಂಗಳೂರುಬೆಂಗಳೂರಿನಲ್ಲಿ ಶೆಡ್‌ಗೆ ಬಿದ್ದ ಬೆಂಕಿಗೆ ಇಬ್ಬರು ಮಕ್ಕಳು ಸಜೀವ ದಹನ

ಬೆಂಗಳೂರಿನಲ್ಲಿ ಶೆಡ್‌ಗೆ ಬಿದ್ದ ಬೆಂಕಿಗೆ ಇಬ್ಬರು ಮಕ್ಕಳು ಸಜೀವ ದಹನ

ಬೆಂಗಳೂರು: ತಾತ್ಕಾಲಿಕ ಶೆಡ್‌ಗೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಲ್ಲಿ ಸಿಲುಕಿ ಇಬ್ಬರು ಪುಟ್ಟ ಮಕ್ಕಳು ಸಜೀವ ದಹನವಾಗಿರುವ ಮನಕಲುಕುವ ಘಟನೆ ಕೊತ್ತನೂರಿನ ನಾರಾಯಣಪುರ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ರಾಯಚೂರು ಮೂಲದ ದುರ್ಗಪ್ಪ ಮತ್ತು ಸಾವಿತ್ರಿ ದಂಪತಿಯ ಮಕ್ಕಳಾದ ಅರ್ಜುನ್  (5), ಆಶಾ (3) ಮೃತಪಟ್ಟವರು, ಮಧ್ಯಾಹ್ನ 1:30 ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಒಂದು ಮಗು ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದರೆ, ಮತ್ತೊಂದು ಮಗು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದೆ.

ಇವರ ತಂದೆ-ತಾಯಿ ಕೂಲಿ ಕೆಲಸಕ್ಕೆ 6 ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಅಜ್ಜಿ ಶೆಡ್‌ನಿಂದ ಹೊರಗಡೆ ಹೋಗಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಮಕ್ಕಳು ಶೆಡ್‌ನಲ್ಲೇ ಸಿಲುಕಿಕೊಂಡು ಮೃತಪಟ್ಟಿದ್ದಾರೆ.

ಕಳೆದ ಆರು ತಿಂಗಳಿಂದ ನಾರಾಯಣಪುರದ ಈ ಶೆಡ್‌ಗಳಲ್ಲಿ ವಾಸವಾಗಿದ್ದ ದುರ್ಗಪ್ಪ ದಂಪತಿಯು ಜೆಸಿಎಸ್ ಕಂಪನಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವಾರದಿಂದ ಊರಿಗೆ ಹೋಗಿದ್ದ ದಂಪತಿ, ಕೆಲಸಕ್ಕೆ ಹಾಜರಾಗಲು ಬೆಳಿಗ್ಗೆ ಬೆಂಗಳೂರಿಗೆ ಮರಳಿದ್ದರು.

ಪೋಷಕರು ಕೆಲಸಕ್ಕೆ ತೆರಳುವ ಮುನ್ನ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲು ನಿರ್ಧರಿಸಿದ್ದರು. ಆದರೆ, ಕೆಲಸ ಮಾಡುವ ಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಬರಬೇಡಿ ಎಂದು ಮೇಸ್ತ್ರಿ ಕಟ್ಟುನಿಟ್ಟಾಗಿ ಸೂಚಿಸಿದ್ದ ಹಿನ್ನೆಲೆಯಲ್ಲಿ, ತಾಯಿ ಸಾವಿತ್ರಿ ತನ್ನ ಇಬ್ಬರು ಮಕ್ಕಳನ್ನು ಅಜ್ಜಿಯ ಸುಪರ್ದಿಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದ್ದರು

ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಮಕ್ಕಳು ಅಜ್ಜಿಯ ಜೊತೆ ಶೆಡ್‌ನಲ್ಲಿ ಆಟವಾಡುತ್ತಿದ್ದರು. ಅಜ್ಜಿ ಮಕ್ಕಳನ್ನು ಶೆಡ್‌ನಲ್ಲಿ ಬಿಟ್ಟು ಶೌಚಾಲಯಕ್ಕೆಂದು ಹೊರಗೆ ಹೋಗಿದ್ದರು. ಅವರು ವಾಪಸ್ ಬರುವಷ್ಟರಲ್ಲಿ ಇಡೀ ಶೆಡ್‌ ಬೆಂಕಿಯ ಕೆನ್ನಾಲಗೆಗೆ ತುತ್ತಾಗಿತ್ತು. ಒಳಗೆ ಸಿಲುಕಿದ್ದ ಮಕ್ಕಳು ಹೊರಬರಲಾರದೆ ಕಿರುಚಾಡಿದರೂ ಯಾರೂ ಸಹಾಯಕ್ಕೆ ಧಾವಿಸಲು ಸಾಧ್ಯವಾಗದಷ್ಟು ಬೆಂಕಿ ತೀವ್ರವಾಗಿತ್ತು.

ಶಾರ್ಟ್ ಸರ್ಕ್ಯೂಟ್ ಶಂಕೆ:

ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಶೆಡ್‌ನಲ್ಲಿ ಉಂಟಾದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬಡ ಕೂಲಿ ಕಾರ್ಮಿಕರ ಕನಸುಗಳು ಬೆಂಕಿಯಲ್ಲಿ ಬೂದಿಯಾಗಿದ್ದು, ರಾಯಚೂರಿನ ದಂಪತಿಯ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments