Monday, June 29, 2026
Google search engine
Homeಅಪರಾಧಮೋದಿ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ತನಿಖೆಗೆ ಕೇಂದ್ರ ತನಿಖಾ ಸಂಸ್ಥೆಗಳು ಎಂಟ್ರಿ

ಮೋದಿ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ತನಿಖೆಗೆ ಕೇಂದ್ರ ತನಿಖಾ ಸಂಸ್ಥೆಗಳು ಎಂಟ್ರಿ

ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎನ್ಐಎ,ರಾ ಸೇರಿ ಕೇಂದ್ರ ತನಿಖಾ‌ ತಂಡಗಳ ಅಧಿಕಾರಿಗಳು ರಾಜ್ಯಕ್ಕೆ ಧಾವಿಸಿ‌ ತನಿಖೆಯನ್ನು ಕೈಗೊಂಡಿವೆ.

ತನಿಖಾ ಸಂಸ್ಥೆಗಳಾದ ಎನ್ಐಎ, ರಾ ಜೊತೆಗೆ  ಕೇಂದ್ರ ಗುಪ್ತಚರ ದಳದ ಅಧಿಕಾರಿಗಳು  ನಗರಕ್ಕೆ ಧಾವಿಸಿ ರಾಜ್ಯದ ತನಿಖಾ‌ ತಂಡಗಳಿಂದ ಮಾಹಿತಿ ಪಡೆದು ಸ್ಥಳ ಪರೀಕ್ಷೆ ನಡೆಸಿ ತನಿಖೆಯನ್ನು ನಡೆಸಿವೆ.

ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಡಿವೈಎಸ್‌ಪಿ ನೇತೃತ್ವದ ತಂಡವು ಸ್ಫೋಟಕ ಪತ್ತೆಯಾದ ವಡೇರಹಳ್ಳಿ ಗೇಟ್ ಸಮೀಪದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದಕ್ಷಿಣ ಜಿಲ್ಲಾ ಎಸ್‌ಪಿ ಶ್ರೀನಿವಾಸಗೌಡ ಅವರಿಂದ ಮಾಹಿತಿ ಪಡೆದಿದೆ.

ರಾಜ್ಯ ಗುಪ್ತದಳ ಮತ್ತು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಅವರು ಪ್ರಕರಣ ಸಂಬಂಧ ಎನ್‌ಐಎ ಸೇರಿ ಕೇಂದ್ರ ತನಿಖಾ‌ ತಂಡದ ಅಧಿಕಾರಿಗಳಿಗೆ ಮಾಹಿತಿಯನ್ನು ಒದಗಿಸಿದ್ದಾರೆ. ಘಟನೆಯು ಉದ್ದೇಶಪೂರ್ವಕವಾಗಿ ನಡೆದಿದೆಯೋ ಇಲ್ಲವೇ ಆಕಸಿಕವಾಗಿ ನಡೆದಿದೆಯೋ ಎಂಬುದರ ಕುರಿತು ಇಂಚಿಂಚೂ ಮಾಹಿತಿಯನ್ನು ಕಲೆ ಹಾಕುತ್ತಿದೆ.

ಎನ್‌ಐಎಗೆ ಎನ್‌ಎಸ್‌ಜಿ ಹಾಗೂ ಆರ್‌ಎಡಬ್ಲ್ಯೂ ಅಧಿಕಾರಿಗಳೂ ಕೂಡಾ ಸ್ಥಳಕ್ಕೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಂಡಿದ್ದಾರೆ ನಗರ ಹಾಗೂ ರಾಮನಗರ ಪೊಲೀಸರು ತನಿಖೆಗೆ ಕೈಜೋಡಿಸಿದ್ದಾರೆ.

ಪ್ರಧಾನಿಯವರ ಭದ್ರತೆಗೆ ಸವಾಲು ಹಾಕುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆಯೋ ಅಥವಾ ಇದರ ಹಿಂದೆ ಯಾವುದಾದರೂ ಉಗ್ರಗಾಮಿ ಸಂಘಟನೆಗಳ ಕೈವಾಡವಿದೆಯೋ ಎನ್ನುವುದು  ಜೊತೆಗೆ
ಸ್ಫೋಟಕದ ಮಾದರಿಯನ್ನು ವಿಶ್ಲೇಷಿಸಿ ಅದನ್ನು ತಯಾರಿಸಲು ಬಳಸಲಾದ ಸ್ಫೋಟಕ ವಸ್ತುಗಳ ಮೂಲವನ್ನು  ಪತ್ತೆಹಚ್ಚಲು ಮುಂದಾಗಿದ್ದಾರೆ.

ಪ್ರಧಾನಿಯವರ ಭದ್ರತೆಯ ಜವಾಬ್ದಾರಿ ಹೊರುವ ಎನ್‌ಎಸ್‌ಜಿ ಪಡೆಯ ಮುಖ್ಯಸ್ಥರು ಕೂಡ ರಾಜ್ಯ ಪೊಲೀಸ್ ಇಲಾಖೆಯಿಂದ ತನಿಖಾ ಪ್ರಗತಿಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಉದ್ದೇಶಪೂರ್ವಕ ಕೃತ್ಯದ ಶಂಕೆ;

ರಾಮನಗರ ಡಿವೈಎಸ್‌ಪಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಾಥಮಿಕ ತನಿಖೆಯಲ್ಲಿ ಕೆಲವು ಆಘಾತಕಾರಿ ಅಂಶಗಳು ಹೊರಬಂದಿವೆ. ಜಿಲೆಟಿನ್ ಕಡ್ಡಿಗಳಿದ್ದ ಬಾಕ್ಸ್‌ಗಳನ್ನು ದುಷ್ಕರ್ಮಿಗಳು  ಉದ್ದೇಶಪೂರ್ವಕವಾಗಿ ಇಟ್ಟಿದ್ದಾರೆ ಎಂಬುದು ತನಿಖೆ ವೇಳೆ ದೃಢಪಟ್ಟಿದೆ.
ಆದರೆ, ಸ್ಫೋಟಕಗಳನ್ನು ಯಾವ ನಿಖರ ಸಮಯದಲ್ಲಿ ತಂದು ಇರಿಸಲಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸ್ಫೋಟಕ ಪತ್ತೆಯಾದ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವುದು ತನಿಖಾ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸಿಸಿಟಿವಿ ಮತ್ತು ಗಡಿ ತಪಾಸಣೆ:

ಘಟನಾ ಸ್ಥಳದಲ್ಲಿ ಕ್ಯಾಮೆರಾ ಇಲ್ಲದಿದ್ದರೂ, ಆ ರಸ್ತೆಯ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಕಗ್ಗಲಿಪುರ ಠಾಣೆ ಪೊಲೀಸರು ಮತ್ತು ಎನ್ಐಎ ತಂಡ ಜಂಟಿಯಾಗಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಮೇಲೆ ನಿಗಾ ಇಟ್ಟಿವೆ.

ಅಂತರರಾಜ್ಯ ಅಥವಾ ಅಂತರಜಿಲ್ಲಾ ನಂಟು ಈ ಕೃತ್ಯದ ಹಿಂದೆ ಇದೆಯೇ ಎಂಬ ನಿಟ್ಟಿನಲ್ಲಿ ‘ರಾ’ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಅತ್ಯಂತ ಬಿಗಿ ಭದ್ರತೆಯ ನಡುವೆಯೂ ಇಂತಹ ಭದ್ರತಾ ಲೋಪ ಸಂಭವಿಸಿರುವುದು ಕೇಂದ್ರ ಮತ್ತು ರಾಜ್ಯದ ಭದ್ರತಾ ಏಜೆನ್ಸಿಗಳಲ್ಲಿ ಆತಂಕ ಮೂಡಿಸಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ.

ವಾರದ ಮುನ್ನ ಮಾಹಿತಿ:

ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಕ್ಕೆ ಪ್ರಧಾನಿಯವರಂತಹ ಗಣ್ಯವ್ಯಕ್ತಿಗಳು ನಗರಕ್ಕೆ ಭೇಟಿ ಕೊಡುವ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಗುಪ್ತಚರ ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ, ನಗರ ಪೊಲೀಸ್‌ ಆಯುಕ್ತರಿಗೆ ಒಂದು ವಾರ ಮುಂಚಿತವಾಗಿಯೇ ಮಾಹಿತಿಯನ್ನು ನೀಡಲಾಗುತ್ತದೆ.

ಪ್ರಧಾನಿಯವರು ಯಾವ ಸ್ಥಳದಿಂದ ಯಾವ ಸಮಯದಲ್ಲಿ ಹೊರಡುತ್ತಾರೆ, ಎಷ್ಟು ಹೊತ್ತಿಗೆ ಬರುತ್ತಾರೆ, ತೆರಳುವ ಮಾರ್ಗಗಳು, ಹೊರಡುವ ಸಮಯ, ವೇದಿಕೆ ಮೇಲೆ ಎಷ್ಟು ಜನರಿರಬೇಕು ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನೂ ಅವರಿಗೆ ಭದ್ರತೆ ಒದಗಿಸುವ ಎಸ್‌ಪಿಜಿಗೆ ಮಾಹಿತಿ ನೀಡಬೇಕು.

ಭದ್ರತಾ ಲೋಪ ಪತ್ತೆ:

ಮೋದಿಯವರು ಬೆಂಗಳೂರಿಗೆ ಬರುವುದು ಒಂದು ವಾರ ಮುಂಚಿತವಾಗಿಯೇ ಗೊತ್ತಿತ್ತು. ದೆಹಲಿಯಿಂದ ಹೊರಟು 9.35 ಕ್ಕೆ ಎಚ್‌ಎಎಲ್ ವಿಮಾನನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ 10.05 ಕ್ಕೆ ಅಲ್ಲಿಂದ ತೆರಳಿ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಮಂದಿರಕ್ಕೆ ಆಗಮನ ಎಂಬುದು ಅವರ ಪ್ರವಾಸದ ಪಟ್ಟಿಯಲ್ಲೇ ಇತ್ತು.

ಇಷ್ಟೆಲ್ಲಾ ಮಾಹಿತಿ ಇದ್ದರೂ ಅತ್ಯಂತ ಬಿಗಿ ಭದ್ರತೆ ಇರುವ ಸ್ಥಳದಲ್ಲೇ ಭದ್ರತಾ ಲೋಪ ಉಂಟಾಗಿರುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ.ಸಾಮಾನ್ಯವಾಗಿ ಈ ಹಿಂದೆ ಬೆಂಗಳೂರು ಸೇರಿದಂತೆ ಕರ್ನಾಟಕಕ್ಕೆ ಮೋದಿಯವರು ಅನೇಕ ಬಾರಿ ಬಂದಿದ್ದರು. ಆ ಸಂದರ್ಭದಲ್ಲಿ ಎಂದಿಗೂ ಇಂತಹ ಭದ್ರತಾ ವೈಫಲ್ಯ ಉಂಟಾಗಿರಲಿಲ್ಲ.

ಕನಕಪುರದ ತಾತಗುಣಿ ಬಳಿಯಿರುವ ಒಡೆಯರಹಳ್ಳಿ ಗೇಟ್ ಬಳಿ ಎರಡು ಜಿಲೆಟಿನ್ ಕಡ್ಡಿ ಹಾಗೂ ಬೆಂಕಿಪೊಟ್ಟಣ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments