ಪಂದ್ಯದ ಹೆಚ್ಚುವರಿ ಆಟದಲ್ಲಿ ನಿಕೊಲಸ್ ಫುಲ್ ಕುರ್ಗ್ ಗಳಿಸಿದ ಗೋಲಿನ ನೆರವಿನಿಂದ ಮಾಜಿ ವಿಶ್ವ ಚಾಂಪಿಯನ್ ಜರ್ಮನಿ ತಂಡ ಯುರೋಕಪ್ ಫುಟ್ಬಾಲ್ ಪಂದ್ಯದಲ್ಲಿ ಸ್ವಿಜರ್ಲೆಂಡ್ ವಿರುದ್ಧ ಸೋಲಿನಿಂದ ಪಾರಾಗಿದೆ.
ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಜರ್ಮನಿ ಮತ್ತು ಸ್ವಿಜರ್ಲೆಂಡ್ ತಂಡ 1-1 ಗೋಲಿನಿಂದ ಸಮಬಲ ಸಾಧಿಸಿದವು. ಈ ಗೆಲುವಿನೊಂದಿಗೆ ಜರ್ಮನಿ 7 ಅಂಕದೊಂದಿಗೆ ಎ ಗುಂಪಿನ ಅಗ್ರಸ್ಥಾನಿಯಾಗಿ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ಡ್ಯಾನ್ ನೊಡ್ಯೆ 28ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಸ್ವಿಜರ್ ಲೆಂಡ್ ತಂಡ ಮುನ್ನಡೆ ಸಾಧಿಸಿದ್ದೂ ಅಲ್ಲದೇ ಕೊನೆಯವರೆಗೂ ಮೇಲುಗೈ ಸಾಧಿಸಿತ್ತು. ಜರ್ಮನಿ ಗೋಲು ಗಳಿಸಲು ಸಾಕಷ್ಟು ಹೋರಾಟ ನಡೆಸಿದರೂ ಫಲ ನೀಡಲಿಲ್ಲ.
ನಿಗದಿತ ಅವಧಿಯ ಆಟ ಮುಕ್ತಾಯಗೊಂಡರೂ ಸ್ವಿಜರ್ಲೆಂಡ್ 1-0ಯಿಂದ ಮುನ್ನಡೆ ಸಾಧಿಸಿತ್ತು. ಆದರೆ ಪಂದ್ಯದ ಹೆಚ್ಚುವರಿ ಸಮಯದಲ್ಲಿ ಸುಮಾರು 92ನೇ ನಿಮಿಷದಲ್ಲಿ ನಿಕೊಲಸ್ ಫುಲ್ ಕುರ್ಗ್ ಗೋಲು ಸಿಡಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದೂ ಅಲ್ಲದೇ ಜರ್ಮನಿ ಪಾಳಯದಲ್ಲಿ ಮಿಂಚು ಹರಿಸಿದರು.