ಬೆಂಗಳೂರು:ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಇಂಡಿಗೋ ವಿಮಾನವೊಂದರ ಹಿಂಭಾಗ ರನ್‌ವೇಗೆ ತಾಗಿದ್ದು,ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅಸ್ಸಾಂನ ಗುವಾಹಟಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಇಂಡಿಗೋದ 6ಇ6542 ವಿಮಾನ ಭಾನುವಾರ ಸಂಜೆ ಲ್ಯಾಂಡಿಂಗ್ ವೇಳೆ ಟೇಲ್ ಸ್ಟ್ರೈಕ್‌ಗೆ ಒಳಗಾಗಿದೆ. ಬಲವಾದ ಗಾಳಿಯ ನಡುವೆ ವಿಮಾನ ಇಳಿಯುವಾಗ ಅದರ ಹಿಂಭಾಗ ರನ್‌ವೇಗೆ ತಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಪ್ರಯತ್ನದಲ್ಲಿ ಲ್ಯಾಂಡಿಂಗ್ ಸಾಧ್ಯವಾಗದ ಹಿನ್ನೆಲೆಯಲ್ಲಿ ಎರಡನೇ ಪ್ರಯತ್ನದಲ್ಲಿ ವಿಮಾನ ಸುರಕ್ಷಿತವಾಗಿ ರನ್‌ವೇ ಮೇಲೆ ಇಳಿದಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ. ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ತಾತ್ಕಾಲಿಕವಾಗಿ ಸೇವೆಯಿಂದ ಹೊರಗಿಟ್ಟು ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗಿದೆ. ವಿಮಾನದಲ್ಲಿ ಅಸಹಜ ರನ್‌ವೇ ಸಂಪರ್ಕ ಉಂಟಾಗಿರುವ ಕುರಿತು ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಟೇಲ್ ಸ್ಟ್ರೈಕ್ ಎಂದರೇನು?
ವಿಮಾನ ಟೇಕ್‌ಆಫ್ ಅಥವಾ ಲ್ಯಾಂಡಿಂಗ್ ವೇಳೆ ಅದರ ಹಿಂಭಾಗ ರನ್‌ವೇಗೆ ತಾಗುವುದನ್ನು ಟೇಲ್ ಸ್ಟ್ರೈಕ್ ಎಂದು ಕರೆಯಲಾಗುತ್ತದೆ. ಬಲವಾದ ಗಾಳಿ, ಹವಾಮಾನ ಪರಿಸ್ಥಿತಿ ಅಥವಾ ಲ್ಯಾಂಡಿಂಗ್ ವೇಳೆ ವಿಮಾನದ ಕೋನದಲ್ಲಿನ ಬದಲಾವಣೆ ಸೇರಿದಂತೆ ವಿವಿಧ ಕಾರಣಗಳಿಂದ ಇಂತಹ ಘಟನೆ ಸಂಭವಿಸಬಹುದು.
ಇಂತಹ ಘಟನೆಗಳ ಬಳಿಕ ವಿಮಾನವನ್ನು ಸಂಪೂರ್ಣ ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಘಟನೆಯ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತನಿಖೆ ನಡೆಸುವ ಸಾಧ್ಯತೆಯಿದ್ದು, ತನಿಖೆಯ ಬಳಿಕ ನಿಖರ ಕಾರಣ ತಿಳಿದುಬರಲಿದೆ.
ಈ ತಿಂಗಳಲ್ಲೇ ಮತ್ತೊಂದು ಘಟನೆ:
ಈ ತಿಂಗಳ ಆರಂಭದಲ್ಲಿ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವೊಂದು ಪಾರ್ಕಿಂಗ್ ವೇಳೆ ವಿಷುಯಲ್ ಡಾಕಿಂಗ್ ಗೈಡೆನ್ಸ್ ಸಿಸ್ಟಮ್ (ವಿಡಿಜಿಎಸ್) ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿತ್ತು. ಆ ಸಂದರ್ಭದಲ್ಲೂ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದರು.



