Thursday, October 22, 2026
Google search engine
Homeಅಪರಾಧಬೆಂಗಳೂರಿನಲ್ಲಿ ನಿಗೂಢ ಸ್ಫೋಟ: ಎನ್ ಐಎ ತನಿಖೆ

ಬೆಂಗಳೂರಿನಲ್ಲಿ ನಿಗೂಢ ಸ್ಫೋಟ: ಎನ್ ಐಎ ತನಿಖೆ

ಬೆಂಗಳೂರು: ವಿಜಯದಶಮಿ‌ ಹಬ್ಬದ ಸಂಭ್ರಮದ ವೇಳೆ ಪುಲಿಕೇಶಿನಗರದಲ್ಲಿ ಎರಡು ದಿನಗಳ ಹಿಂದೆ ನಡೆದ ಸ್ಫೋಟದಲ್ಲಿ  ಸುಧಾರಿತ ಸ್ಪೋಟಕ ಹಾಗೂ ಬ್ಯಾಟರಿ ಬಳಕೆಯ ಶಂಕೆಯ ಹಿನ್ನೆಲೆಯಲ್ಲಿ ಪ್ರಕರಣೆ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಕೈಗೆತ್ತಿಕೊಳ್ಳಲಿದೆ.

ಕಳೆದ ಅ. 20 ರಂದು ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ಸ್ಫೋಟ ಪ್ರಕರಣದ ತನಿಖೆಯನ್ನು ತೀವ್ರಗೊಂಡಿರುವ ಬೆನ್ನಲ್ಲೇ ಸ್ಪೋಟದ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ತನಿಖಾ ವರದಿಯನ್ನು ಪಡೆದ ಬಳಿಕ ಪರಿಶೀಲನೆ ತನಿಖೆಯನ್ನು ಎಲ್ಲಾ ಅಯಾಮಗಳಲ್ಲಿ ನಡೆಸಲಿದೆ.

ಪ್ರಾಥಮಿಕ ತನಿಖೆಯಲ್ಲಿ, ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು,ಇಲ್ಲಿಯವರೆಗಿನ ತನಿಖೆಯ ವರದಿಯನ್ನು ಎನ್ ಐಎ ಅಧಿಕಾರಿಗಳು ಪಡೆದುಕೊಳ್ಳಲಿದ್ದಾರೆ.

ಸ್ಥಳ ಪರಿಶೀಲನೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ ಎಸ್ ಎಲ್ ) ವರದಿಯನ್ನು ಪರಿಶೀಲಿಸಿದ ಬಳಿಕ ಪ್ರಕರಣದ ತನಿಖೆಯಲ್ಲಿ ಎನ್‌ಐಎ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಸ್ಫೋಟದ ಬಗ್ಗೆ ಈಗಾಗಲೇ ಮಾಹಿತಿ ಪಡೆದಿರುವ ಎನ್‌ಐಎ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಗಳನ್ನು ಕೇಳಿದ್ದಾರೆ.

ಈ ನಡುವೆ ಎನ್ಎಐ ಅಧಿಕಾರಿಗಳು ಸ್ಫೋಟದ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಪೂರ್ವ ವಿಭಾಗದ ಪೊಲೀಸರಿಂದ ಪ್ರಾಥಮಿಕ ಮಾಹಿತಿಗಳನ್ನು ಕಲೆ ಹಾಕಿದ್ಧಾರೆ. ಆಕ್ಮಸಿಕವಾಗಿ ಸಂಭವಿಸಿದೆಯಾ ಅಥವಾ ವಿಧ್ವಂಸಕ ಕೃತ್ಯವೆಸಗಲು ತಯಾರಿ ನಡೆಸಲಾಗಿತ್ತೆ ಎಂಬ ಆಯಾಮದಲ್ಲಿ ಎನ್ಎಐ ತಂಡ ತನಿಖೆ ನಡೆಸುತ್ತಿದೆ.

ಮತ್ತೊಂದೆಡೆ, ಕಟ್ಟಡದಲ್ಲಿದ್ದ ಕಾವಲುಗಾರ ಅಲ್ಲಾವುದ್ದೀನ್ ಮತ್ತು ಪೇಂಟರ್ ಸೂರಜ್ ಕುಮಾರ್ ಹೇಳಿಕೆ ಪಡೆದುಕೊಳ್ಳಲಾಗಿದೆ. ಇಬ್ಬರೂ ಸಹ ಗೊಂದಲದ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.
ಕಳೆದ ಎರಡು ವಾರಗಳಿಂದ ಅಸ್ಸೋಂ ಮೂಲದ ಅಲ್ಲಾವುದ್ದೀನ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರೆ, ಕೃತ್ಯಕ್ಕೂ ಮುನ್ನ ಎರಡು ದಿನಗಳಿಂದ ಉತ್ತರ ಪ್ರದೇಶ ಮೂಲದ ಸೂರಜ್, ಸಹೋದರ ಅಭಿಕುಮಾರ್ ಪೇಂಟಿಂಗ್ ಕೆಲಸದಲ್ಲಿ ತೊಡಗಿದ್ದರು. ಇಬ್ಬರೂ ಸಹೋದರರು ಬಾಬುಸಾಪಾಳ್ಯದಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮಮೂರ್ತಿನಗರದ ಉದ್ಯಮಿಯೊಬ್ಬರು ಪುಲಕೇಶಿನಗರದಲ್ಲಿ ಏಳು ಅಂತಸ್ತಿನ ಕಟ್ಟಡದ ಮಾಲೀಕರಾಗಿದ್ದಾರೆ. ಮೊದಲ ಎರಡು ಮಹಡಿಗಳಲ್ಲಿ ವಾಣಿಜ್ಯ ಮಳಿಗೆಗಳಿವೆ. ಇನ್ನುಳಿದ ಮಹಡಿಗಳಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮಂಗಳವಾರ (ಅ.20) ಮಧ್ಯಾಹ್ನ 1:30ರ ಸುಮಾರಿಗೆ ಕಾರ್ಯನಿರತರಾಗಿದ್ದ ಅಲ್ಲಾವುದ್ದೀನ್​ಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ಪಾರ್ಸೆಲ್ ಕಳುಹಿಸಿರುವುದಾಗಿ ತಿಳಿಸಿದ್ದ. ಬ್ಯಾಟರಿ ಮಾದರಿ ಪಾರ್ಸೆಲ್ ಸ್ವೀಕರಿಸಿದ ಕಾವಲುಗಾರ ಅಲ್ಲಾವುದ್ದೀನ್, 7ನೇ ಮಹಡಿಯಲ್ಲಿದ್ದ ಸೂರಜ್​ನನ್ನು 5ನೇ ಮಹಡಿಗೆ ಕರೆಯಿಸಿಕೊಂಡು ತೆಗೆಯುವಂತೆ ಸೂಚಿಸಿದ್ದರು. ಪಾರ್ಸೆಲ್ ತೆರೆದು ಸ್ವಿಚ್ ಆನ್ ಮಾಡುತ್ತಿದ್ದಂತೆ ಸ್ಫೋಟಗೊಂಡಿದೆ.

ಘಟನೆಯಲ್ಲಿ ಸೂರಜ್ ಬಾಯಿ ಮತ್ತು ಕೈಗೆ ಗಾಯಗಳಾದರೆ, ಅಲ್ಲಾವುದ್ದೀನ್ ಅವರಿಗೆ ಕೈ ಸೇರಿದಂತೆ ಇತರೆ ಭಾಗಗಳಿಗೆ ಸುಟ್ಟ ಗಾಯವಾಗಿತ್ತು. ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ, ಅಲ್ಲಿ ದೊರಕಿದ್ದ ಟೈಮರ್, ವೈರ್ ಹಾಗೂ ಬ್ಯಾಟರಿಗಳನ್ನು ವಶಕ್ಕೆ ಪಡೆದು ಎಫ್ಎಸ್​ಎಲ್​ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದ ಸ್ವರೂಪ ಮತ್ತು ಉಗ್ರಗಾಮಿ ಕೃತ್ಯದ ಅಯಾಮಗಳನ್ನು ಗಮನದಲ್ಲಿಟ್ಟುಕೊಂಡು ಎನ್ಐಎ ಈಗಾಗಲೇ ಸ್ಥಳೀಯ ಪೊಲೀಸರು ಹಾಗೂ ಸೀನ್ ಆಫ್ ಕ್ರೈಮ್ ಆಫೀಸರ್ಸ್ ಸೋಕೋ ಸಿದ್ಧಪಡಿಸಿದ ಪ್ರಾಥಮಿಕ ತನಿಖಾ ದಾಖಲೆಗಳನ್ನು ಪಡೆದುಕೊಂಡಿದೆ.

ಮೂರು ಬ್ಯಾಟರಿಗಳ ಬಳಕೆ:

ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ಸ್ಫೋಟದಲ್ಲಿ ಮೂರು ಬ್ಯಾಟರಿಗಳನ್ನು ಬಳಸಿರುವುದು ಸ್ಫೋಟಕ ಸಾಧನ ಬಳಕೆಯು ಪ್ರಾಥಮಿಕ ತನಿಖೆಯ ವೇಳೆ ವ್ಯಕ್ತವಾಗಿದೆ.

ಸ್ಫೋಟದ ನಿಖರ ಸ್ವರೂಪ ಮತ್ತು ಬಳಸಲಾಗಿರುವ ವಸ್ತುಗಳ ಬಗ್ಗೆ ವಿಧಿವಿಜ್ಞಾನ ವರದಿಯಿಂದ ಮಾಹಿತಿ ಲಭ್ಯವಾಗಬೇಕಿದೆ.

ಈ ಪ್ರಕರಣದ ತನಿಖೆಯನ್ನು ಎಟಿಸಿ ಹಾಗೂ ಸ್ಥಳೀಯ ಪೊಲೀಸರು ಮುಂದುವರಿಸಿದ್ದಾರೆ.
ಪೊಲೀಸರು ಈಗಾಗಲೇ ಎನ್‌ಐಎಗೆ ಅನಾಮಧೇಯ ಕರೆ ಬಂದಿದ್ದ ವಿಚಾರವನ್ನೂ ತಿಳಿಸಿದ್ದಾರೆ.

ಸೆಕ್ಯುರಿಟಿ ಗಾರ್ಡ್ ಕೈವಾಡ:

ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಸೋಕೋ ತಂಡ ಹಾಗೂ ಎಫ್‌ಎಸ್‌ಎಲ್ ನಡೆಸಿದ ಪರಿಶೀಲನೆಗೆ ಸಂಬಂಧಿಸಿದ ವರದಿಗಳನ್ನು ಎನ್‌ಐಎಗೆ ನೀಡಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕಟ್ಟಡದೊಳಗೆ ಪಾರ್ಸೆಲ್ ಇಡಲು ಸೆಕ್ಯುರಿಟಿ ಗಾರ್ಡ್ ಮುಂದಾಗಿದ್ದ. ತನಗೆ ಅನಾಮಧೇಯ ಕರೆ ಬಂದಿದ್ದು, ಪಾರ್ಸೆಲ್ ಅನ್ನು ಕಟ್ಟಡದ ಒಳಗೆ ಇಡುವಂತೆ ಸೂಚಿಸಲಾಗಿತ್ತು ಎಂದು ಸೆಕ್ಯುರಿಟಿ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಬಳಿಕ ಸೆಕ್ಯುರಿಟಿ ಗಾರ್ಡ್ ಮತ್ತು ಪೇಂಟರ್ ಇಬ್ಬರೂ ಸೇರಿ ಪಾರ್ಸೆಲ್ ತೆರೆಯಲು ಮುಂದಾದಾಗ ಸ್ಫೋಟ ಸಂಭವಿಸಿದೆ ಎಂದು ಇಬ್ಬರೂ ತಿಳಿಸಿದ್ದಾರೆ. ಅನಾಮಧೇಯ ಕರೆ, ಪಾರ್ಸೆಲ್‌ನ ಮೂಲ ಹಾಗೂ ಸ್ಫೋಟಕ್ಕೆ ಕಾರಣವಾದ ಅಂಶಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸೂಕ್ಷ್ಮತೆ ಹಿನ್ನೆಲೆಯಲ್ಲಿ ಎಟಿಸಿ ಹಾಗೂ ಸ್ಥಳೀಯ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಎನ್‌ಐಎ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಲಭ್ಯವಿರುವ ಸಾಕ್ಷ್ಯಗಳು ಮತ್ತು ವರದಿಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುವ ನಿರೀಕ್ಷೆಯಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments