ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಅಪಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಇಬ್ಬರು ನಾಯಕರ ವಿರುದ್ಧ ಬಿಜೆಪಿ ದಾಖಲಿಸಿದ್ದ ಖಾಸಗಿ ಮಾನನಷ್ಟ ದೂರನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಪಪ್ರಚಾರದ ಆರೋಪ ರದ್ದು ಪಡಿಸಿ ಆದೇಶ ನೀಡಿದೆ.
ಇದೇ ಪ್ರಕರಣದಲ್ಲಿ ಜುಲೈ 4ರಂದು ಅಂದಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೂ (ಕೆಪಿಸಿಸಿ) ಇದೇ ರೀತಿಯ ಪರಿಹಾರ ನೀಡಲಾಗಿತ್ತು. ಅಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ವಿಚಾರಣೆಗೂ ಈ ವರ್ಷದ ಜನವರಿಯಲ್ಲಿ ಹೈಕೋರ್ಟ್ ತಡೆ ನೀಡಿತ್ತು.
ಪ್ರಕರಣದ ವಿವರ:
2023ರ ವಿಧಾನಸಭಾ ಚುನಾವಣೆಗೂ ಮುನ್ನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಿದ್ದ ‘ಭ್ರಷ್ಟಾಚಾರದ ರೇಟ್ ಕಾರ್ಡ್’ ಜಾಹೀರಾತುಗಳು ವಿವಾದಕ್ಕೆ ಕಾರಣವಾಗಿದ್ದವು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಇಲಾಖೆಗಳ ನೇಮಕಾತಿ ಮತ್ತು ವರ್ಗಾವಣೆಗಳಿಗೆ ನಿರ್ದಿಷ್ಟ ದರ ನಿಗದಿಪಡಿಸಲಾಗಿದ್ದು, ಕಮಿಷನ್ ಪಡೆಯಲಾಗುತ್ತಿದೆ ಎಂದು ಜಾಹೀರಾತುಗಳಲ್ಲಿ ಆರೋಪಿಸಲಾಗಿತ್ತು. ಅಲ್ಲದೆ, ಬಿಜೆಪಿಯ ಜನಪ್ರಿಯ ‘ಡಬಲ್ ಎಂಜಿನ್ ಸರ್ಕಾರ’ ಘೋಷಣೆಗೆ ಪರ್ಯಾಯವಾಗಿ ‘ಟ್ರಬಲ್ ಎಂಜಿನ್ ಸರ್ಕಾರ’ ಎಂಬ ಪದವನ್ನೂ ಬಳಸಲಾಗಿತ್ತು.
ಗೌರವಕ್ಕೆ ತಂದ ಧಕ್ಕೆ:
ಈ ಜಾಹೀರಾತುಗಳು ಪಕ್ಷದ ವರ್ಚಸ್ಸು, ಹೆಸರು ಮತ್ತು ಗೌರವಕ್ಕೆ ಧಕ್ಕೆ ತಂದಿವೆ. ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಅವಕಾಶಗಳ ಮೇಲೆ ಪರಿಣಾಮ ಬೀರುವ ಉದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕ ಆಕ್ಷೇಪ ವ್ಯಕ್ತಪಡಿಸಿತ್ತು.
ಈ ಸಂಬಂಧ ಬಿಜೆಪಿ ಮುಖಂಡ ಕೇಶವ ಪ್ರಸಾದ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಖಾಸಗಿ ಮಾನನಷ್ಟ ದೂರು ದಾಖಲಿಸಿದ್ದರು. 2023ರಲ್ಲಿ ವಿಚಾರಣಾ ನ್ಯಾಯಾಲಯ ಈ ದೂರನ್ನು ಪರಿಗಣನೆಗೆ ತೆಗೆದುಕೊಂಡಿತ್ತು.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಖಾಸಗಿ ದೂರನ್ನು ರದ್ದುಗೊಳಿಸಿರುವುದು ಕಾಂಗ್ರೆಸ್ ನಾಯಕರಿಗೆ ಮಹತ್ವದ ಕಾನೂನು ಪರಿಹಾರ ದೊರೆತಂತಾಗಿದೆ.
