ಸಿಬಿಐ, ಚುನಾವಣಾ ಆಯೋಗದ ಮುಖ್ಯಸ್ಥರು ಸೇರಿದಂತೆ ಕೇಂದ್ರ ಸರ್ಕಾರದ ಹಲವು ಪ್ರಮುಖ ಹುದ್ದೆಗಳ ನೇಮಕಾತಿಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ಅಧಿಕಾರ ಲಭಿಸಲಿದೆ.
ಹೌದು, ಕೇಂದ್ರದಲ್ಲಿ 10 ವರ್ಷಗಳ ನಂತರ ಮೊದಲ ಬಾರಿ ಪ್ರತಿಪಕ್ಷ ಬಂದಿದೆ. ಪ್ರತಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ನೇಮಕಗೊಳ್ಳುವ ಮೂಲಕ ಹಲವು ಮಹತ್ವದ ಜವಾಬ್ದಾರಿಗಳನ್ನು ಪಡೆದಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಪ್ರತಿಪಕ್ಷ ನಾಯಕನ ಸಹಮತವಿಲ್ಲದೇ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳುವಂತಿಲ್ಲ.
ತಂದೆ ರಾಜೀವ್ ಗಾಂಧಿ, ತಾಯಿ ಸೋನಿಯಾ ಗಾಂಧಿ ನಂತರ ರಾಹುಲ್ ಗಾಂಧಿ ಪ್ರತಿಪಕ್ಷ ನಾಯಕನ ಜವಾಬ್ದಾರಿ ಹೊತ್ತಿದ್ದಾರೆ. ರಾಜೀವ್ ಗಾಂಧಿ 1989ರಿಂದ 1990ರ ಅವಧಿಯಲ್ಲಿ ಪ್ರತಿಪಕ್ಷ ನಾಯಕನಾಗಿ ಕಾರ್ಯ ನಿರ್ವಹಿಸಿದರೆ, ಸೋನಿಯಾ ಗಾಂಧಿ 1999ರಿಂದ 2004ರವರೆಗೆ ಪ್ರತಿಪಕ್ಷ ನಾಯಕಿ ಆಗಿದ್ದರು. ಇದೀಗ ಈ ಜಾಗವನ್ನು ರಾಹುಲ್ ಗಾಂಧಿ ನಿಭಾಯಿಸುವ ಹೊಣೆ ಹೊತ್ತಿದ್ದಾರೆ.
ಸಂವಿಧಾನದ ಪ್ರಕಾರ ಸ್ವಯುತ್ತ ಸಂಸ್ಥೆಗಳಾದ ಸಿಬಿಐ, ಕೇಂದ್ರ ಚುನಾವಣಾ ಆಯೋಗ, ಮಾನವ ಹಕ್ಕುಗಳ ಆಯೋಗ ಹಾಗೂ ಗುಪ್ತಚರ ಇಲಾಖೆ ಮುಖ್ಯಸ್ಥರ ನೇಮಕ ಸಮಿತಿಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸ್ಥಾನ ಪಡೆಯಲಿದ್ದಾರೆ.
ಪ್ರಧಾನಮಂತ್ರಿ ನೇತೃತ್ವದ ಈ ಸಮಿತಿಯಲ್ಲಿ ಸಂಬಂಧಿಸಿದ ಕೇಂದ್ರ ಸಚಿವ ಹಾಗೂ ಪ್ರತಿಪಕ್ಷ ನಾಯಕ ಇರುತ್ತಾರೆ. ಇವರು 2-1 ಅನುಪಾತದಲ್ಲಿ ನಿರ್ಣಯ ಕೈಗೊಂಡು ಸಿಬಿಐ ನಿರ್ದೇಶಕರು, ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥರು, ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರು ಹಾಗೂ ಗುಪ್ತಚರ ಇಲಾಖೆ ನಿರ್ದೇಶಕರ ನೇಮಕ ಆಯ್ಕೆ ಮಾಡಬೇಕಿದೆ.
ರಾಹುಲ್ ಗಾಂಧಿ ಇದೀಗ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಪಡೆಯಲಿದ್ದು, ಸಂಸತ್ ಭವನದೊಳಗೆ ಕಚೇರಿ ಪಡೆಯಲಿದ್ದಾರೆ. ಪ್ರತಿಪಕ್ಷ ನಾಯಕ ಎಂಬುದು ಪರ್ಯಾಯ ಪ್ರಧಾನಿ ಸ್ಥಾನ ಆಗಿರುವುದರಿಂದ ಅಷ್ಟೇ ಸ್ಥಾನಮಾನಗಳು ಸಿಗಲಿವೆ.