ಭಾರತ ಮತ್ತು ಇಂಗ್ಲೆಂಡ್ ನಡುವೆ ಗುರುವಾರ ರಾತ್ರಿ ನಡೆಯಬೇಕಿದ್ದ ಟಿ-20 ವಿಶ್ವಕಪ್ 2ನೇ ಸೆಮಿಫೈನಲ್ ಪಂದ್ಯ ಮಳೆಯ ಕಾರಣ ಮುಂದೂಡಿಕೆ ಆಗುವ ಸಾಧ್ಯತೆ ಇದೆ.
ವೆಸ್ಟ್ ಇಂಡೀಸ್ ನ ಗಯಾನದಲ್ಲಿ ನಡೆಯಬೇಕಿರುವ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಕೆಲವೇ ಗಂಟೆಗಳ ಮುನ್ನವೂ ಭಾರೀ ಮಳೆಯಾಗುತ್ತಿದೆ. ಇದರಿಂದ ಗುರುವಾರ ನಡೆಯಬೇಕಿದ್ದ ಪಂದ್ಯ ರದ್ದಾಗುವ ಸಾಧ್ಯತೆ ಇದೆ.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡವನ್ನು 9 ವಿಕೆಟ್ ಗಳಿಂದ ಸೋಲಿಸಿರುವ ದಕ್ಷಿಣ ಆಫ್ರಿಕಾ ತಂಡ ಫೈನಲ್ ಪ್ರವೇಶಿಸಿ ಇತಿಹಾಸ ಬರೆದಿದೆ. ಇದೀಗ ದಕ್ಷಿಣ ಆಫ್ರಿಕಾ ತಂಡವನ್ನು ಫೈನಲ್ ನಲ್ಲಿ ಯಾವ ತಂಡ ಎದುರಿಸಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಮೊದಲ ಸೆಮಿಫೈನಲ್ ಪಂದ್ಯಕ್ಕೂ ಮಳೆ ಅಡ್ಡಿಯಾಗಿದ್ದು, ಇದೀಗ ಎರಡನೇ ಸೆಮಿಫೈನಲ್ ಗೂ ಮಳೆ ಅಡ್ಡಿಯಾಗುವ ಸಾಧ್ಯತೆ ಇದ್ದು, ಒಂದು ವೇಳೆ ಓವರ್ ಗಳ ಸಂಖ್ಯೆಯಲ್ಲಿ ಕಡಿತವಾದರೆ ಉಭಯ ತಂಡಗಳು ಲೆಕ್ಕಾಚಾರದ ಮೇಲೆ ಕಣಕ್ಕಿಳಿಯಬೇಕಾಗುತ್ತದೆ.
ಸೆಮಿಫೈನಲ್ ಪಂದ್ಯಕ್ಕೆ ಒಂದು ದಿನ ಮೀಸಲು ಇಡಲಾಗಿದ್ದು, ಒಂದು ವೇಳೆ ಗುರುವಾರ ಪಂದ್ಯ ನಡೆಯಲು ಅಸಾಧ್ಯವಾದರೆ ಶುಕ್ರವಾರ ಪಂದ್ಯ ನಡೆಯುವ ಸಾಧ್ಯತೆ ಇದೆ. ಆಗ ಕೇವಲ ಒಂದು ದಿನದ ಅಂತರದಲ್ಲಿ ಫೈನಲ್ ಪಂದ್ಯಕ್ಕೆ ಸಜ್ಜಾಗಬೇಕಾದ ಒತ್ತಡ ಹೆಚ್ಚಲಿದೆ.