ಲೋಕಸಭಾ ಚುನಾವಣೆಗೆ ಕರ್ನಾಟಕದ ಬಹುತೇಕ ಸ್ಥಾನಗಳಿಗೆ ಟಿಕೆಟ್ ಅಂತಿಮಗೊಳಿಸಲಾಗಿದ್ದು, ಮಂಗಳವಾರ ಅಧಿಕೃತ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ. ಭಾರೀ ಕುತೂಹಲ ಮೂಡಿಸಿದ್ದ ಮೈಸೂರು-ಕೊಡಗು ಕ್ಷೇತ್ರದಿಂದ 2 ಬಾರಿಯ ಸಂಸದರ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿದೆ.
ಕೇಂದ್ರ ಚುನಾವಣಾ ಸಮಿತಿ ಸೋಮವಾರ ಸಭೆ ನಡೆಸಿದ ನಂತರ ಕರ್ನಾಟಕದ 28 ಕ್ಷೇತ್ರಗಳ ಪೈಕಿ 15ರಿಂದ 22 ಕ್ಷೇತ್ರಗಳ ಟಿಕೆಟ್ ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಮೈಸೂರು=ಕೊಡಗು ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಮಾಜಿ ಪತ್ರಕರ್ತ ಪ್ರತಾಪ್ ಸಿಂಹಗೆ ಕೊಕ್ ನೀಡಲಾಗಿದ್ದು, ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಗೆ ಟಿಕೆಟ್ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೈಕಮಾಂಡ್ ಸೂಚನೆಯಂತೆ ಎರಡು ಕ್ಷೇತ್ರದಲ್ಲಿ ನಿಂತು ಸೋಲುಂಡಿದ್ದ ವಿ.ಸೋಮಣ್ಣ ಅವರಿಗೆ ತುಮಕೂರಿನಿಂದ ಟಿಕೆಟ್ ನೀಡಲಾಗಿದ್ದರೆ, ಮಾಜಿ ಸಚಿವ ಕೆ. ಸುಧಾಕರ್ ಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ, ಬೆಂಗಳೂರು ಕೇಂದ್ರದಿಂದ ಪಿ.ಸಿ. ಮೋಹನ್, ಬೆಂಗಳೂರು ಗ್ರಾಮಾಂತರದಿಂದ ಡಾ.ಮಂಜುನಾಥ್, ಚಿಕ್ಕೋಡಿಯಿಂದ ರಮೇಶ್ ಕತ್ತಿ, ಕಲಬುರಗಿಯಿಂದ ಉಮೇಶ್ ಕತ್ತಿ, ಬೆಳಗಾವಿಯಿಂದ ಜಗದೀಶ್ ಶೆಟ್ಟರ್, ಹಾವೇರಿಯಿಂದ ಬಸವರಾಜ್ ಬೊಮ್ಮಾಯಿ, ವಿಜಯಪುರದಿಂದ ಗೋವಿಂದ ಕಾರಜೋಳ, ಚಿತ್ರದುರ್ಗದಿಂದ ಎ.ನಾರಾಯಣಸ್ವಾಮಿ, ಶಿವಮೊಗ್ಗದಿಂದ ಬಿ.ವೈ. ರಾಘವೇಂದ್ರ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿದೆ.