ಭಾರತ ತಂಡವನ್ನು ವಿಶ್ವಕಪ್ ಪ್ರಶಸ್ತಿವರೆಗೂ ರೂಪಿಸಿದ ರಾಹುಲ್ ದ್ರಾವಿಡ್ ಅವರನ್ನು ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮುಂತಾದ ಆಟಗಾರರು ಎತ್ತಾಡಿದ್ದೂ ಅಲ್ಲದೇ ಅವರ ಕೈಗೆ ಟ್ರೋಫಿ ನೀಡಿ ಸಂಭ್ರಮಿಸಿದ ವೀಡಿಯೋ ಈಗ ವೈರಲ್ ಆಗಿದೆ.
ಗಯಾನದಲ್ಲಿ ಶನಿವಾರ ತಡರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿದ ಭಾರತ ತಂಡ 17 ವರ್ಷಗಳ ನಂತರ ಟಿ-20 ವಿಶ್ವಕಪ್ ಗೆದ್ದ ಸಾಧನೆ ಮಾಡಿತು.
ರಾಹುಲ್ ದ್ರಾವಿಡ್ ಆಟಗಾರನಾಗಿ ಒಂದು ಬಾರಿಯೂ ವಿಶ್ವಕಪ್ ಗೆಲ್ಲದೇ ಇದ್ದರೂ ಕೋಚ್ ಆಗಿ ಎರಡು ವಿಶ್ವಕಪ್ ಗೆ ತಂಡವನ್ನು ರೂಪಿಸಿದ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ. ಶುಭಮನ್ ಗಿಲ್ ಸಾರಥ್ಯದ 19 ವರ್ಷದೊಳಗಿನವ ವಿಶ್ವಕಪ್ ಗೆದ್ದ ನಂತರ ಭಾರತ ತಂಡವನ್ನು ಈಗ ಎರಡನೇ ಬಾರಿ ಪ್ರಶಸ್ತಿಯತ್ತ ಮುನ್ನಡೆಸಿದ್ದಾರೆ.
2 ಎಸೆತಗಳಲ್ಲಿ 9 ರನ್ ಗಳಿಸಬೇಕಿದ್ದಾಗ ಹಾರ್ದಿಕ್ ಪಾಂಡ್ಯ ಎಸೆತದ 5ನೇ ಎಸೆತದಲ್ಲಿ ದಕ್ಷಿಣ ಆಫ್ರಿಕಾ ತಂಡ ಒಂದು ರನ್ ಗಳಿಸುತ್ತಿದ್ದಂತೆ ಬೆಂಚಲ್ಲಿ ಕುಳಿತಿದ್ದ ರಾಹುಲ್ ದ್ರಾವಿಡ್ ಜೋರಾಗಿ ಕಿರುಚಿ ಕೈ ಮೇಲೆತ್ತಿ ಸಂಭ್ರಮಿಸಿದರು. ಭಾರತ 7 ರನ್ ಜಯ ದಾಖಲಿಸುತ್ತಿದ್ದಂತೆ ಅವರ ಸಂಭ್ರಮ ಮುಗಿಲುಮುಟ್ಟಿತ್ತು.
ಭಾರತ ಆಟಗಾರರಿಗೆ ಟ್ರೋಫಿ ಪ್ರದಾನ ಮಾಡುತ್ತಿದ್ದಂತೆ ಪ್ರತಿಯೊಬ್ಬರೂ ಟ್ರೋಫಿ ಹಿಡಿದು ಸಂಭ್ರಮಿಸುತ್ತಿದ್ದಾಗ ದ್ರಾವಿಡ್ ಮತ್ತೊಂದು ಕಡೆ ನಿಂತು ಸಂಭ್ರಮಿಸುತ್ತಿದ್ದರು. ವಿರಾಟ್ ಕೊಹ್ಲಿ ಟ್ರೋಫಿಯನ್ನು ತಂದು ದ್ರಾವಿಡ್ ಗೆ ಕೈಗೆ ಇಟ್ಟಾಗ ನಯವಾಗಿ ನಿರಾಕರಿಸಿದ ದ್ರಾವಿಡ್ ನಂತರ ಟ್ರೋಫಿ ಕೈಗೆ ಸಿಗುತ್ತಿದ್ದಂತೆ ಜೋರಾಗಿ ಕೂಗಿ ಸಂಭ್ರಮಿಸಿದರು.
ದ್ರಾವಿಡ್ ಸಂಭ್ರಮಿಸುತ್ತಿದ್ದಂತೆ ಆಟಗಾರರು ಅವರನ್ನು ಎತ್ತಿಕೊಂಡು ಗಾಳಿಯಲ್ಲಿ ತೂರಾಡಿ ಸಂಭ್ರಮಿಸಿದರು. ಇದರಲ್ಲಿ ಭಾರತ ತಂಡದ ದಿಗ್ಗಜರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಕೂಡ ಕೈ ಜೋಡಿಸಿದ್ದು ವಿಶೇಷವಾಗಿತ್ತು.
ಭಾರತ ವಿಶ್ವಕಪ್ ಗೆಲ್ಲುತ್ತಿದ್ದಂತೆ ಪ್ರಧಾನಿ ಮೋದಿ ಆಟಗಾರರಿಗೆ ಕರೆ ಮಾಡಿ ಅಭಿನಂದಿಸಿದ್ದೂ ಅಲ್ಲದೇ ದ್ರಾವಿಡ್ ಅವರಿಗೆ ವಿಶೇಷವಾಗಿ ಕರೆ ಮಾಡಿ ಭಾರತ ತಂಡವನ್ನು ರೂಪಿಸಿದ್ದಕ್ಕಾಗಿ ವಿಶೇಷವಾಗಿ ಅಭಿನಂದಿಸುವುದಾಗಿ ಹೇಳಿದರು.