ರಜೆಯ ಮೋಜು ಕಳೆಯಲು ನೀರಿಗೆ ಇಳಿದಿದ್ದ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 5 ಮಂದಿ ಜಲಪಾತದಲ್ಲಿ ಕೊಚ್ಚಿ ಹೋದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪ್ರವಾಸಿ ತಾಣವಾದಲ್ಲಿ ಸಂಭವಿಸಿದೆ.
ಲೋನೊವಾಲದ ಬುಶಿ ಜಲಾಶಯದ ಹಿನ್ನೀರಿನ ಬಳಿಯ ಕಿರು ಜಲಪಾತದಲ್ಲಿ ಮೋಜಿಗಾಗಿ ಇಳಿದಿದ್ದ ಒಂದೇ ಕುಟುಂಬದ 5 ಮಂದಿ ಒಟ್ಟಿಗೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
36 ವರ್ಷದ ತಾಯಿ ಸಹಿಸ್ತಾ ಲಿಯಾಖತ್ ಅನ್ಸಾರಿ ಹಾಗೂ ಅಮಿನಾ ಸಲ್ಮಾನ್ (13), ಉಮೇರಾ ಸಲ್ಮಾನ್ (8), ಅಡ್ನಾನ್ ಅನ್ಸಾರಿ (4) ಮತ್ತು ಮರಿಯಾ ಅನ್ಸಾರಿ (9) ಮೃತಪಟ್ಟ ದುರ್ದೈವಿಗಳು. ಅಡ್ನಾನ್ ಅನ್ಸಾರಿ ಮತ್ತು ಮರಿಯಾ ಅವರ ಮೃತದೇಹಗಳಿಗೆ ಶೋಧ ಕಾರ್ಯ ಮುಂದುವರಿದಿದ್ದು, ಉಳಿದ 5 ಮಂದಿಯ ಶವ ಜಲಪಾತದ ಹಿನ್ನೀರಿನಲ್ಲಿ ಪತ್ತೆಯಾಗಿದೆ.
ಭಾನುವಾರ ರಜೆ ಕಳೆಯಲು ಜಲಪಾತದ ಬಳಿ ಹೋಗಿದ್ದರು. ಸಾಧಾರಣವಾಗಿದ್ದ ನೀರಿನ ಬಳಿ ಸ್ನಾನ ಮಾಡುತ್ತಿದ್ದಾಗ ಮಧ್ಯಾಹ್ನ 1.30ರ ಸುಮಾರಿಗೆ ದಿಢೀರನೆ ನದಿಯ ನೀರಿನಲ್ಲಿ ಭಾರೀ ಏರಿಕೆಯಾಗಿದ್ದರಿಂದ ಕೊಚ್ಚಿ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನಿಂದ 80 ಕಿ.ಮೀ. ದೂರದ ಪ್ರವಾಸಿ ತಾಣದಲ್ಲಿ ಕುಟುಂಬದವರು ರಜೆ ಕಳೆಯಲು ಬಂದಿದ್ದರು. ಒಂದೇ ಕುಟುಂಬದ 5 ಮಂದಿ ಹಾಗೂ ಮತ್ತಿಬ್ಬರು ಪ್ರವಾಸಿಗರು ನೀರಿನ ಮಧ್ಯದ ಬಂಡೆಗಳ ಮೇಲೆ ಕುಳಿತು ಎಂಜಾಯ್ ಮಾಡುತ್ತಿದ್ದಾಗ ದಿಢೀರನೆ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದ ಎದ್ದು ರಕ್ಷಣೆ ಪಡೆಯುವಷ್ಟರಲ್ಲಿ ದಡದ ಮೇಲಿದ್ದ ಪ್ರವಾಸಿಗರು ನೋಡು ನೋಡುತ್ತಿದ್ದಂತೆ ಅವರು ಕೊಚ್ಚಿ ಹೋಗಿದ್ದಾರೆ. ಇಬ್ಬರನ್ನು ರಕ್ಷಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ.
ಮುಂಗಾರು ಮಳೆ ಅಬ್ಬರ ಆರಂಭವಾಗಿದೆ. ಮಳೆಗಾಲದ ಈ ಸಂದರ್ಭದಲ್ಲಿ ಪೋಷಕರು ನದಿಗೆ ಇಳಿಯದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.